ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಮೊಗ್ರಾಲ್ ಪುತ್ತೂರಿನಲ್ಲಿ ಮೀನುಸಾಗಾಟದ ಲಾರಿಯ ಟಯರ್ ಸ್ಪೋಟಗೊಂಡು ರಸ್ತೆಗೆ ಅಡ್ಡ ಮಗುಚಿಬಿದ್ದುಮೀನಿನ ಕ್ರೇಟ್‍ಗಳು ರಸ್ತೆಯಲ್ಲಿ ಚಲ್ಲಾಪಿಲ್ಲಿಯಾಗಿದೆ. ಅಪಘಾತದಿಂದ ತಾಸುಗಳ ಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳ್ಳಲು ಕಾರಣವಾಗಿತ್ತು. ಲಾರಿ ಚಾಲಕ, ವಡಗರ ನಿವಾಸಿ ವಿಜಿನ್ ಕುಮಾರ್ ಎಂಬವರು ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ.
ಗುರುವಾರ ರಾತ್ರಿ ಕೋಯಿಕ್ಕೋಡ್‍ನಿಂದ ಮಂಗಳೂರಿನ ಉಳ್ಳಾಲದ ಕಾರ್ಖಾನೆಗೆ ಮೀನು ಸಾಗಿಸುತ್ತಿದ್ದ ಲಾರಿಯ ಟಯರ್ ಏಕಾಏಕಿ ಸ್ಪೋಟಗೊಂಡಿದ್ದು, ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಅಡ್ಡ ಪಲ್ಟಿಯಾಗಿದೆ. ಟಯರ್ ಸ್ಪೋಟ್ ಭಾರೀ ಶಬ್ದದಿಂದ ಬೆಚ್ಚಿಬಿದ್ದ ಜನತೆ ಸ್ಥಳಕ್ಕೆ ಧಾವಿಸಿ, ಕಾಸರಗೋಡು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಹಿರಿಯ ಅಗ್ನಿಶಾಮಕ ಮತ್ತು ರಕ್ಷಣಾ ಅಧಿಕಾರಿ ವಿ.ಎನ್. ವೇಣುಗೋಪಾಲ್ ನೇತೃತ್ವದಲ್ಲಿ ಅಗ್ನಿಶಾಮಕ ವಾಹನದ ಎರಡು ಘಟಕಗಳು ಸ್ಥಳಕ್ಕೆ ತಲುಪಿ, ಮಗುಚಿ ಬಿದ್ದ ಲಾರಿಯಿಂದ ಮೀನಿನ ಬಕೆಟ್‍ಗಳನ್ನು ಇತರ ವಾಹನಗಳಿಗೆ ಸ್ಥಳಾಂತರಿಸಿ, ಕ್ರೇನಿನ ಸಹಾಐದಿಂದ ಮಗುಚಿಬಿದ್ದ ಲಾರಿಯನ್ನು ಮೇಲಕ್ಕೆತ್ತಿದ ನಂತರ ಹೆದ್ದಾರಿಯಲ್ಲಿ ವಾಹನ ಸಂಚಾರ ಸುಗಮಗೊಳಿಸಲಾಗಿದೆ. ರಸ್ತೆಯ ಮೇಲೆ ವ್ಯಾಪಕವಾಗಿ ಹರಡಿದ್ದ ತೈಲದ ಅಂಶ ಮತ್ತು ಮೀನಿನ ತ್ಯಾಜ್ಯವನ್ನು ಅಗ್ನಿಶಾಮಕದಳ ವಾಹನದ ಮೂಲಕ ಸೋಪ್ ಪುಡಿಯೊಂದಿಗೆ ನೀರು ಸಿಂಪಡಿಸಿ ಶುಚಿಗೊಳಿಸಲಾಯಿತು.




