ಲಂಡನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2021ರ ಜನವರಿ 6ರಂದು ಮಾಡಿದ್ದ ಭಾಷಣವನ್ನು ಎಡಿಟ್ ಮಾಡಿ ಪ್ರಸಾರ ಮಾಡಿದ ವಿಷಯದ ಬಗ್ಗೆ ಬಿಬಿಸಿ ಮತ್ತು ತಾನು ವೈಯಕ್ತಿಕವಾಗಿ ಕ್ಷಮೆಕೋರಿದ ಪತ್ರವನ್ನು ಶ್ವೇತಭವನಕ್ಕೆ ಕಳುಹಿಸಿರುವುದಾಗಿ ಬಿಬಿಸಿಯ ಅಧ್ಯಕ್ಷ ಸಮೀರ್ ಶಾ ಗುರುವಾರ ಹೇಳಿದ್ದಾರೆ.
ಆದರೆ ಈ ವಿಷಯಕ್ಕೆ ಸಂಬಂಧಿಸಿ ಮಾನನಷ್ಟ ಮೊಕದ್ದಮೆಗೆ ಯಾವುದೇ ಆಧಾರವಿಲ್ಲ ಎಂದು ಬಿಬಿಸಿ ಪ್ರತಿಪಾದಿಸಿದೆ. ` ನಾವು ಮಾಡಿದ ಎಡಿಟ್ (ಪರಿಷ್ಕರಣೆ) ನಾವು ಭಾಷಣದ ಒಂದು ವಿಭಾಗವನ್ನು ಮಾತ್ರ ತೋರಿಸುತ್ತಿದ್ದೇವೆ ಎಂಬ ಅನಿಸಿಕೆಯನ್ನು ಸೃಷ್ಟಿಸಿದೆ ಮತ್ತು ಅಧ್ಯಕ್ಷ ಟ್ರಂಪ್ ಅವರು ಹಿಂಸಾತ್ಮಕ ಕ್ರಮಗಳಿಗೆ ನೇರವಾಗಿ ಕರೆ ನೀಡಿರುವಂತೆ ತಪ್ಪು ಅನಿಸಿಕೆಯನ್ನು ಮೂಡಿಸಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇವೆ ಎಂದು ಬಿಬಿಸಿ ಹೇಳಿದೆ. ವಿಷಯದ ಬಗ್ಗೆ ಕ್ಷಮೆ ಯಾಚಿಸುವಂತೆ ಟ್ರಂಪ್ ವಕೀಲರು ಬಿಬಿಸಿಗೆ ಪತ್ರ ರವಾನಿಸಿದ್ದರು ಮತ್ತು 1 ಕೋಟಿ ಡಾಲರ್ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಹೇಳಿದ್ದರು.
ಪ್ರಮಾದದ ಹೊಣೆ ಹೊತ್ತು ಬಿಬಿಸಿ ಪ್ರಧಾನ ನಿರ್ದೇಶಕ ಟಿಮ್ ಡೇವಿ ಮತ್ತು ಸುದ್ದಿ ಮುಖ್ಯಸ್ಥ ಡೆಬೋರಾ ಟರ್ನೆಸ್ ರವಿವಾರ ರಾಜೀನಾಮೆ ನೀಡಿದ್ದರು.




