ತಿರುವನಂತಪುರಂ: ಭಾರತೀಯ ಚುನಾವಣಾ ಆಯೋಗ ಕೈಗೆತ್ತಿಕೊಂಡಿರುವ ತೀವ್ರ ಮತಪಟ್ಟಿ ಪರಿಷ್ಕರಣೆಗೆ ತಡೆ ನೀಡುವಂತೆ ಕೇರಳ ಸರಕಾರ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ಶುಕ್ರವಾರ ಕೇರಳ ಹೈಕೋರ್ಟ್ ನಿರಾಕರಿಸಿದೆ.
ಇತರ ರಾಜ್ಯಗಳಲ್ಲಿ ನಡೆಸಲು ಉದ್ದೇಶಿಸಿರುವ ತೀವ್ರ ಮತಪಟ್ಟಿ ಪರಿಷ್ಕರಣೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಇನ್ನೂ ಬಾಕಿಯಿರುವಾಗ, ಇಂತಹ ಅರ್ಜಿಗಳನ್ನು ವಿಚಾರಣೆಗೆ ಮಾನ್ಯ ಮಾಡದಿರುವ ನ್ಯಾಯಾಂಗ ಶಿಸ್ತನ್ನು ಹೈಕೋರ್ಟ್ ಗಳು ಪಾಲಿಸಬೇಕಿದೆ ಎಂದು ನ್ಯಾ.ವಿ.ಜಿ.ಅರುಣ್ ಅಭಿಪ್ರಾಯ ಪಟ್ಟಿದ್ದಾರೆ.
ಹೀಗಾಗಿ, ಕೇರಳ ಸರಕಾರವು ಸುಪ್ರೀಂಕೋರ್ಟ್ ಗೆ ಹೋಗಬಹುದು ಎಂದು ಏಕಸದಸ್ಯ ಪೀಠ ಸೂಚಿಸಿದೆ.
ಮುಂಬರುವ ಪಂಚಾಯತಿ ಚುನಾವಣೆಗಳ ಹಿನ್ನೆಲೆಯಲ್ಲಿ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಗೆ ತಡೆ ನೀಡಬೇಕು ಎಂದು ಕೋರಿ ಕೇರಳ ಸರಕಾರ ಹೈಕೋರ್ಟ್ ಮೆಟ್ಟಿಲೇರಿತ್ತು.




