ಬುಧವಾರ ಎಸ್‌ಐಆರ್ ಪ್ರಕ್ರಿಯೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಮತ್ತು ನ್ಯಾ.ಜಾಯಮಾಲ್ಯಾ ಬಾಗ್ಚಿ ಅವರ ಪೀಠವು ನಡೆಸುತ್ತಿತ್ತು.
ಆಧಾರ್ ಕಾರ್ಡ್ ಅದರ ಆಧಾರದ ಮೇಲೆ ಪ್ರಯೋಜನಗಳು ಮತ್ತು ಸವಲತ್ತುಗಳನ್ನು ಒಪ್ಪಿಕೊಳ್ಳುವ ಮಟ್ಟಿಗೆ ಕಾಯ್ದೆಯ ಸೃಷ್ಟಿಯಾಗಿದೆ(ಮತ್ತು ಸಿಂಧುವಾಗಿದೆ). ಅದನ್ನು ಯಾರೂ ವಿವಾದಿಸಲು ಸಾಧ್ಯವಿಲ್ಲ. ಅಂತಿಮವಾಗಿ, ಆಧಾರ್ ಕಾರ್ಡ್‌ನ್ನು ಒಂದು ನಿರ್ದಿಷ್ಟ ಉದ್ದೇಶ ಮತ್ತು ನಿರ್ದಿಷ್ಟ ಶಾಸನಕ್ಕಾಗಿ ರೂಪಿಸಲಾಗಿದೆ. ಆ ಕುರಿತು ಯಾವುದೇ ವಿವಾದವಿರಲು ಸಾಧ್ಯವಿಲ್ಲ ಎಂದು ಹೇಳಿದರು.
'ಬೇರೆ ದೇಶದಿಂದ, ನೆರೆಯ ದೇಶಗಳಿಂದ ಭಾರತದೊಳಗೆ ನುಸುಳುವ ವ್ಯಕ್ತಿಗಳಿದ್ದಾರೆ ಮತ್ತು ಅವರು ಇಲ್ಲಿ ವಾಸವಿದ್ದುಕೊಂಡು ಬಡ ರಿಕ್ಷಾ ಎಳೆಯುವವರಾಗಿ, ಕಟ್ಟಡ ನಿರ್ಮಾಣ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ ಎಂದಿಟ್ಟುಕೊಳ್ಳಿ. ಅವರು ಪಡಿತರ ಅಥವಾ ಇತರ ಯಾವುದೇ ಸೌಲಭ್ಯವನ್ನು ಪಡೆಯಲು ನೀವು ಅವರಿಗೆ ಆಧಾರ್ ಕಾರ್ಡ್ ವಿತರಿಸಿದರೆ ಅದನ್ನು ನಮ್ಮ ಸಾಂವಿಧಾನಿಕ ನೀತಿಯ ಒಂದು ಭಾಗ, ನಮ್ಮ ಸಾಂವಿಧಾನಿಕ ನೈತಿಕತೆಯಾಗಿದೆ ಎನ್ನಬಹುದು. ಆದರೆ ಅವರಿಗೆ ಈ ಸೌಲಭ್ಯ ನೀಡಲಾಗಿದೆ ಎಂಬ ಕಾರಣಕ್ಕೆ ಅವರನ್ನು ಮತದಾರರನ್ನಾಗಿಯೂ ಮಾಡಬೇಕೇ?' ಎಂದು ನ್ಯಾ.ಸೂರ್ಯಕಾಂತ ಪ್ರಶ್ನಿಸಿದರು.
ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ ಸಿಬಲ್ ಅವರು ಆಧಾರ್ ಕಾರ್ಡ್ ಹೊಂದಿದ್ದರೂ ಮತದಾರರ ಪಟ್ಟಿಯಿಂದ ಹೊರಗಿಡಲಾದವರ ವಿಷಯವನ್ನು ಪ್ರಸ್ತಾವಿಸಿದಾಗ ನ್ಯಾ.ಸೂರ್ಯಕಾಂತ ಈ ಪ್ರಶ್ನೆಗಳನ್ನೆತ್ತಿದರು. ತನ್ಮೂಲಕ ಆಧಾರ್ ಕಾರ್ಡ್ ಇರುವುದು ಸೌಲಭ್ಯಗಳಿಗಾಗಿ ಮಾತ್ರವೇ ಹೊರತು ಮತದಾನದ ಹಕ್ಕು ನೀಡಲು ಅಲ್ಲ ಎಂಬ ಸ್ಪಷ್ಟ ಸಂದೇಶವನ್ನು ಸರ್ವೋಚ್ಚ ನ್ಯಾಯಾಲಯವು ನೀಡಿತು.
ಬಿಹಾರದ ಎಸ್‌ಐಆರ್ ನಿದರ್ಶನವನ್ನು ನೀಡಿದ ನ್ಯಾ.ಸೂರ್ಯಕಾಂತ, 'ಅಲ್ಲಿ ಕೆಲವೇ ಆಕ್ಷೇಪಣೆಗಳಿದ್ದವು. ಒಬ್ಬ ವ್ಯಕ್ತಿಯು ನಿಜವಾಗಿಯೂ ಭಾರತೀಯ ಪ್ರಜೆಯಾಗಿದ್ದರೆ ಮತ್ತು ಆತನನ್ನು ಮತದಾರರ ಪಟ್ಟಿಯಿಂದ ಹೊರಗಿರಿಸಿದ್ದರೆ ನಾವು ಕಾರ್ಯವಿಧಾನದ ದೋಷಗಳನ್ನು ಸರಿಪಡಿಸಲು ಅಂತಹ ನಿದರ್ಶನಗಳಿಗಾಗಿ ಕಾತುರದಿಂದ ಎದುರು ನೋಡುತ್ತಿದ್ದೇವೆ' ಎಂದು ಹೇಳಿದರು.
ಮತದಾನದ ದಿನದಂದು ಮತಗಟ್ಟೆಗೆ ಹೋದ ಮತದಾರನಿಗೆ ತನ್ನ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲ ಎಂದು ಗೊತ್ತಾದಾಗ ಆತ ಏನು ಮಾಡಬೇಕು ಎಂದು ಸಿಬಲ್ ಪ್ರಶ್ನಿಸಿದರು.
'ಬಿಹಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಪ್ರತಿ ದಿನ ವರದಿ ಮಾಡುತ್ತಿದ್ದವು ಮತ್ತು ದೂರದಲ್ಲಿರುವ ಜನರಿಗೂ ಏನು ನಡೆಯುತ್ತಿದೆ ಎನ್ನುವುದು ಗೊತ್ತಾಗುತ್ತಿತ್ತು. ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ, ಹೊಸ ಮತದಾರರ ಪಟ್ಟಿ ಹೊರಬರಲಿದೆ ಎನ್ನುವುದು ಎಲ್ಲರಿಗೂ ತಿಳಿದಿತ್ತು. ಹೀಗಿರುವಾಗ ಏನು ನಡೆಯುತ್ತಿದೆ ಎನ್ನುವುದು ತನಗೆ ತಿಳಿದಿರಲಿಲ್ಲ ಎಂದು ಯಾರಾದರೂ ಹೇಳಬಹುದೇ? ಎಂದು ನ್ಯಾ.ಸೂರ್ಯಕಾಂತ ಮರು ಪಶ್ನಿಸಿದರು.
ಬೂತ್ ಮಟ್ಟದ ಅಧಿಕಾರಿಗಳಿಂದ ಸಮೀಕ್ಷೆಯಲ್ಲಿ ದೋಷಗಳ ಕುರಿತು ನ್ಯಾ.ಬಾಗ್ಚಿ, ಸಮೀಕ್ಷೆಯು ಯಾವಾಗಲೂ ಶೇ.100ರಷ್ಟು ಸರಿಯಾಗಿರುವುದಿಲ್ಲ. ಅದಕ್ಕಾಗಿಯೇ ಕರಡು ಮತದಾರರ ಪಟ್ಟಿಗಳನ್ನು ಪ್ರಕಟಿಸಲಾಗುತ್ತದೆ. ಅವುಗಳಲ್ಲಿ ದೋಷ ಕಂಡುಬಂದಾಗ, ಯಾರನ್ನಾದರೂ ಸತ್ತಿದ್ದಾರೆ ಎಂದು ತಪ್ಪಾಗಿ ತೋರಿಸಲ್ಪಟ್ಟಿದ್ದರೆ. ಇದೇ ಕಾರಣದಿಂದ ಮೃತರ ಮತ್ತು ಸ್ಥಳಾಂತರಗೊಂಡವರ ಪಟ್ಟಿಯನ್ನು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಮಾತ್ರವಲ್ಲ, ಪಂಚಾಯತ್‌ಗಳು ಮತ್ತು ಇತರ ಕಡೆಗಳಲ್ಲಿಯೂ ಪ್ರಕಟಿಸಲಾಗುತ್ತದೆ ಎಂದು ಹೇಳಿದರು.




