ಅಹ್ಮದಾಬಾದ್: ಗುಜರಾತ್‌ನ ವಡೋದರಾದ ಶಾಲೆಯೊಂದರಲ್ಲಿ ಶನಿವಾರ ಕರ್ತವ್ಯ ನಿರತರಾಗಿದ್ದ ವೇಳೆ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ)ಯ ಸಹಾಯಕಿಯೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಅವರ ಸಾವು ಸಿಬ್ಬಂದಿಯ ಮೇಲೆ ಎಸ್‌ಐಆರ್ ಕೆಲಸದ ಒತ್ತಡದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಮೃತಪಟ್ಟ ಬಿಎಲ್‌ಒ ಸಹಾಯಕಿಯನ್ನು ಉಷಾಬೆನ್ ಇಂದ್ರಸಿಂಗ್ ಸೋಲಂಕಿ (50) ಎಂದು ಗುರುತಿಸಲಾಗಿದೆ. ಇವರು ವಡೋದರಾದ ಕಡಕ್ ಬಜಾರ್‌ನ ಪ್ರತಾಪ್ ಶಾಲೆಯಲ್ಲಿ ಎಸ್‌ಐಆರ್ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗೊರ್ವಾ ಮಹಿಳಾ ಐಟಿಐಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಉಷಾಬೆನ್ ಅವರನ್ನು ದುರ್ಬಲ ಆರೋಗ್ಯದ ಹೊರತಾಗಿಯೂ ಬೂತ್ ಮಟ್ಟದ ಅಧಿಕಾರಿಯ ಸಹಾಯಕಿಯಾಗಿ ನಿಯೋಜಿಸಲಾಗಿತ್ತು. ಉಷಾಬೆನ್ ಅವರ ಆರೋಗ್ಯದ ಬಗ್ಗೆ ಕುಟುಂಬ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿತ್ತು ಎಂದು ಅವರ ಪತಿ ಇಂದ್ರಸಿಂಗ್ ಸೋಲಂಕಿ ಬಹಿರಂಗಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
''ನನ್ನ ಪತ್ನಿಯ ಆರೋಗ್ಯ ಚೆನ್ನಾಗಿರಲಿಲ್ಲ. ನಾವು ಸುಭಾನ್‌ಪುರದಲ್ಲಿ ಪಿಡಬ್ಲ್ಯು ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದೆವು. ಅವರು ಗರ್ವಾ ಐಟಿಐಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಅವರಿಗೆ ಬಿಎಲ್‌ಒ ಕರ್ತವ್ಯ ನೀಡದಿರುವಂತೆ ನಾವು ಮನವಿ ಮಾಡಿದ್ದೆವು. ಆದರೆ, ನಮ್ಮ ಮನವಿಯ ಹೊರತಾಗಿಯೂ ಅವರನ್ನು ಕರ್ತವ್ಯಕ್ಕೆ ಕಳುಹಿಸಲಾಗಿದೆ'' ಎಂದು ಇಂದ್ರಸಿಂಗ್ ಸೋಲಂಕಿ ಹೇಳಿದ್ದಾರೆ.
ಉಷಾ ಬೆನ್ ಅವರ ಇನ್ನೋರ್ವ ಸಂಬಂಧಿ ವಿಕ್ರಮಸಿಂಗ್ ಸುಹಾದಿಯಾ ಎಸ್‌ಐಆರ್‌ನ ಅತ್ಯಧಿಕ ಕೆಲಸದ ಒತ್ತಡದ ಆರೋಪವನ್ನು ಸಮರ್ಥಿಸಿಕೊಂಡಿದ್ದಾರೆ. ''ಐಟಿಐ ಕ್ಲರ್ಕ್ ಕರ್ತವ್ಯಗಳ ಹೊರತಾಗಿ ನೀಡಲಾದ ಕೆಲಸದ ಹೊರೆಯಿಂದ ಅವರು ಒತ್ತಡಕ್ಕೆ ಒಳಗಾಗಿದ್ದರು'' ಎಂದು ಅವರು ಹೇಳಿದ್ದಾರೆ.
ಗುಜರಾತ್‌ನಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಒಟ್ಟು ನಾಲ್ವರು ಬಿಎಲ್‌ಒ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಇವರಲ್ಲಿ ಇಬ್ಬರು ಹಠಾತ್ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದರೆ, ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.




