ನವದೆಹಲಿ: ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ರಾಜಕೀಯ ಪ್ರಭಾವ ಈ ಬಾರಿ ಮಹಾಘಟಬಂಧನ್‌ಗೆ ದೊಡ್ಡ ಹೊಡೆತ ನೀಡಿರುವುದು ಸ್ಪಷ್ಟವಾಗುತ್ತಿದೆ. 2020ರ ಚುನಾವಣೆಯಲ್ಲಿ ಚಿರಾಗ್ ಪಸ್ವಾನ್ ಎನ್‌ಡಿಎ ಮತಗಳನ್ನು ಕಿತ್ತು ತೀವ್ರ ಹಿನ್ನಡೆಯನ್ನುಂಟುಮಾಡಿದ್ದರೆ, ಈ ಬಾರಿ ಪ್ರಶಾಂತ್ ಕಿಶೋರ್ ನೇತೃತ್ವದ ಸೂರಜ್ ಪಕ್ಷ ಮಹಾಘಟಬಂಧನ್ ಮತಾಬ್ಯಾಂಕ್‌ಗೆ ನೇರ ಪರಿಣಾಮ ಬೀರಿದೆ.
ಸ್ವತಃ ಚುನಾವಣೆಗೆ ಸ್ಪರ್ಧೆ ಮಾಡದಿದ್ದರೂ ಪ್ರಶಾಂತ್ ಕಿಶೋರ್ ಅವರ ಸೂರಜ್ ಪಕ್ಷವು 240 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಇದರಿಂದ ಮಹಾಘಟಬಂಧನ್ ಮತಗಳು ವಿಭಜನೆಯಾಗಿದ್ದು, ಹಲವು ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರಗೊಂಡಿತ್ತು.
2020ರಲ್ಲಿ ಚಿರಾಗ್ ಪಸ್ವಾನ್ ನೇತೃತ್ವದ ಎಲ್‌ಜೆಪಿ 135 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿತ್ತು. ಕೇವಲ 1 ಸ್ಥಾನ ಗೆದ್ದಿದ್ದರೂ, 5.8% ಮತಗಳನ್ನು ಪಡೆಯುವ ಮೂಲಕ ಎನ್‌ಡಿಎ, ವಿಶೇಷವಾಗಿ ಜೆಡಿಯು,ಗೆ ದೊಡ್ಡ ನಷ್ಟವನ್ನುಂಟುಮಾಡಿತ್ತು. ಆಗ ಎಲ್‌ಜೆಪಿ ಜೆಡಿಯು ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲೇ ಅಭ್ಯರ್ಥಿಗಳನ್ನು ನಿಲ್ಲಿಸಿದ್ದುದರಿಂದ ಪರಿಣಾಮ ಹೆಚ್ಚಾಗಿತ್ತು.
ಲೋಕಸಭಾ ಚುನಾವಣೆಗೆ ಬಂದಾಗ ಚಿರಾಗ್ ಪಸ್ವಾನ್ ಎನ್‌ಡಿಎ ಜೊತೆ ಕೈಜೋಡಿಸಿದರು. ಕೇಂದ್ರದಲ್ಲಿ ಮೋದಿ ಸಂಪುಟದಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಕ್ಯಾಬಿನೆಟ್ ಸಚಿವ ಸ್ಥಾನವೂ ಅವರಿಗೆ ಲಭಿಸಿತು. ಈ ಬಾರಿ ನಡೆದ ಚುನಾವಣೆಯಲ್ಲಿ ಎಲ್‌ಜೆಪಿಗೆ 29 ಸ್ಥಾನಗಳು ಹಂಚಿಕೆಯಾಗಿವೆ.




