ಕಾಸರಗೋಡು: ವಿದ್ಯಾರ್ಥಿಗಳ ಸಾಮಥ್ರ್ಯ, ಸೃಜನಶೀಲತೆಯನ್ನು ಪ್ರಕಟಪಡಿಸುವ ವೇದಿಕೆಯಾದ 'ಚಿನ್ಮಯ ಫೆಸ್ಟ್'ನಲ್ಲಿ ವಿವಿಧ ಕಲಾ-ಸಾಂಸ್ಕøತಿಕ ವಿಭಾಗಗಳಲ್ಲಿ ಜಯಗಳಿಸಿದ ಸ್ಪರ್ಧಾರ್ಥಿಗಳಿಗೆ ಬಹುಮಾನ ವಿತರಣೆ ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಕಾಸರಗೋಡು ಚಿನ್ಮಯ ವಿದ್ಯಾಲಯದಲ್ಲಿ ನಡೆಯಿತು. ಚಿನ್ಮಯ ಮಿಷನ್ ಕೇರಳ ಘಟಕದ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತಿ ಅವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು.
ಮಕ್ಕಳು ಸಮಾಜದ ಭವಿಷ್ಯವಾಗಿದ್ದು, ಅವರ ಪ್ರತಿಭೆಯನ್ನು ಬೆಳೆಸುವಲ್ಲಿ ಇಂತಹ ಸ್ಪರ್ಧಾ ವೇದಿಕೆಗಳಿಗೆ ಮಹತ್ವದ ಪಾತ್ರವಿದೆ ಎಂದು ಅವರು ಅಭಿಪ್ರಾಯಪಟ್ಟರು. ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಗುರುತಿಸಿ ಉತ್ತೇಜಿಸುವುದು ಶಿಕ್ಷಕರ ಮತ್ತು ಪೋಷಕರ ಕರ್ತವ್ಯವೂ ಆಗಿದೆ ಎಂದೂ ಸ್ವಾಮೀಜಿ ತಿಳಿಸಿದರು.
ಕಾಸರಗೋಡು ಪೋಕ್ಸೋ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಮು ರಮೇಶ್ ಚಂದ್ರಭಾನು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಮಕ್ಕಳ ಭದ್ರತೆ ಮತ್ತು ಹಕ್ಕು ಸಂರಕ್ಷಣೆ ಸಮಾಜದ ಪ್ರಮುಖ ಜವಾಬ್ದಾರಿಯಾಗಿದೆ. ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವುದರಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕಿದ್ದು, ಕಲೆ ಮತ್ತು ಕ್ರೀಡೆಗಳು ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುತ್ತದೆ ಎಂದು ಅವರು ಈ ಸಂದರ್ಭ ಅಭಿಪ್ರಾಯಪಟ್ಟರು.
ವಿಜೇತರ ಪ್ರತಿಭೆ ಮತ್ತು ಆತ್ಮಾರ್ಥತೆಯನ್ನು ಪ್ರಶಂಸಿಸಿದ ಶಾಲಾ ಪ್ರಾಂಶುಪಾಲ ಟಿ.ವಿ. ಸುಕುಮಾರನ್ ಅವರು, ಹೆಚ್ಚಿನ ಶಿಖರಗಳನ್ನು ಏರುವತ್ತ ಮಕ್ಕಳು ಪ್ರಯತ್ನಿಸಬೇಕು ಹಾಗೂ ಸಮಾಜದ ಸಮಸ್ಯೆಗಳನ್ನು ತೊಡೆದುಹಾಕಲು ಮಕ್ಕಳು ಶ್ರಮಿಸಬೇಕೆಂದು ಸಂದೇಶ ನೀಡಿದರು. ನಂತರ ಶಿಕ್ಷಕ ವೃಂದದವರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಶಿಕ್ಷಕಿಯರಾದ ಟೀನಾ ಕುಮಾರಿ ಸ್ವಾಗತಿಸಿ, ಅಲೀನಾ ಸಿನೋಜ್ ವಂದಿಸಿದರು.




.jpeg)
