HEALTH TIPS

ರಶ್ಯ-ಉಕ್ರೇನ್ ಯುದ್ಧ ಅಂತ್ಯಕ್ಕೆ ಅಮೆರಿಕದ ಶಾಂತಿ ಪ್ರಸ್ತಾಪ

ವಾಷಿಂಗ್ಟನ್: ರಶ್ಯ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಟ್ರಂಪ್ ಆಡಳಿತ ಮತ್ತು ರಶ್ಯದ ಅಧಿಕಾರಿಗಳು ಶಾಂತಿ ಪ್ರಸ್ತಾಪವನ್ನು ರಚಿಸಿದ್ದು ಇದರ ಪ್ರಕಾರ ಉಕ್ರೇನ್ ಸಂಪೂರ್ಣ ಡೊನ್ಬಾಸ್ ಪ್ರಾಂತವನ್ನು ರಶ್ಯಕ್ಕೆ ಬಿಟ್ಟುಕೊಡಲಿದೆ ಮತ್ತು ತನ್ನ ಸಶಸ್ತ್ರ ಪಡೆಗಳ ಪ್ರಮಾಣವನ್ನು 50%ದಷ್ಟು ಕಡಿತಗೊಳಿಸಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ `ದಿ ಫೈನಾನ್ಶಿಯಲ್ ಟೈಮ್ಸ್' ವರದಿ ಮಾಡಿದೆ.

ಯೋಜನೆ ರೂಪಿಸುವಲ್ಲಿ ರಶ್ಯ ಅಧ್ಯಕ್ಷ ಪುಟಿನ್ ಅವರ ಆಪ್ತ ಕಿರಿಲ್ ಡಿಮಿಟ್ರೇವ್ ಅವರೂ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಯೋಜನೆಯನ್ನು ಟ್ರಂಪ್ ಅವರ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಈ ವಾರ ಮಿಯಾಮಿಯಲ್ಲಿ ಉಕ್ರೇನ್‌ ನ ರಾಷ್ಟ್ರೀಯ ಭದ್ರತಾ ಮತ್ತು ರಕ್ಷಣಾ ಮಂಡಳಿಯ ಕಾರ್ಯದರ್ಶಿ ರುಸ್ತೆಮ್ ಉಮೆರೊವ್‍ ಗೆ ರವಾನಿಸಿದ್ದಾರೆ. ಯೋಜನೆಯ ಕೆಲವು ಅಂಶಗಳ ಬಗ್ಗೆ ಅಸಮಾಧಾನವಿದ್ದರೂ ಉಕ್ರೇನ್ ಇದನ್ನು ಒಪ್ಪಿಕೊಳ್ಳಬೇಕೆಂದು ವಿಟ್ಕಾಪ್ ಒತ್ತಾಯಿಸಿದ್ದಾರೆ ಎಂದು ವರದಿ ಹೇಳಿದೆ.

►ಯೋಜನೆಯ ಪ್ರಮುಖ ಅಂಶಗಳು:

* ಕ್ರಿಮಿಯಾ ಮತ್ತು ಡೊನ್ಬಾಸ್ ಅನ್ನು ಕಾನೂನುಬದ್ಧವಾಗಿ ರಶ್ಯದ ಪ್ರದೇಶವೆಂದು ಅಮೆರಿಕಾ ಹಾಗೂ ಇತರ ದೇಶಗಳು ಪರಿಗಣಿಸುತ್ತವೆ. ಆದರೆ ಉಕ್ರೇನ್ ಹಾಗೆ ಮಾಡುವ ಅಗತ್ಯವಿಲ್ಲ.

* ಉಕ್ರೇನ್ ತನ್ನ ಸಶಸ್ತ್ರ ಪಡೆಗಳನ್ನು 50%ದಷ್ಟು ಕಡಿತಗೊಳಿಸಬೇಕು. ಅಮೆರಿಕಾದ ಮಿಲಿಟರಿ ನೆರವೂ ಕಡಿತಗೊಳ್ಳುತ್ತದೆ.

* ಉಕ್ರೇನ್‌ ನ ನೆಲದಲ್ಲಿ ಯಾವುದೇ ವಿದೇಶಿ ಪಡೆಗೆ ಅವಕಾಶವಿರುವುದಿಲ್ಲ. ರಶ್ಯದೊಳಗೆ ಆಳವಾಗಿ ತಲುಪಬಲ್ಲ ಪಾಶ್ಚಿಮಾತ್ಯ ದೀರ್ಘ ಶ್ರೇಣಿಯ ಶಸ್ತ್ರಾಸ್ತ್ರಗಳನ್ನು ಉಕ್ರೇನ್ ಪಡೆಯುವಂತಿಲ್ಲ.

* ರಶ್ಯನ್ ಭಾಷೆಯನ್ನು ಅಧಿಕೃತ ರಾಷ್ಟ್ರಭಾಷೆಯಾಗಿ ಉಕ್ರೇನ್ ಪರಿಗಣಿಸಬೇಕು ಮತ್ತು ರಶ್ಯನ್ ಆರ್ಥೊಡಾಕ್ಸ್ ಚರ್ಚ್‍ನ ಸ್ಥಳೀಯ ಶಾಖೆಗೆ ಅಧಿಕೃತ ಮಾನ್ಯತೆ ನೀಡಬೇಕು.

* ಡೊನ್ಬಾಸ್‍ನಿಂದ ಉಕ್ರೇನ್ ಹಿಂದೆ ಸರಿಯುವ ಪ್ರದೇಶಗಳು `ಮಿಲಿಟರಿ ರಹಿತ ವಲಯ'ವಾಗಲಿದೆ. ಇದು ರಶ್ಯದ ನಿಯಂತ್ರಣದಲ್ಲಿ ಇದ್ದರೂ ಪಡೆಗಳನ್ನು ನಿಯೋಜಿಸುವಂತಿಲ್ಲ.

* ದಕ್ಷಿಣದ ಪ್ರದೇಶಗಳಾದ ಖೆರ್ಸಾನ್ ಮತ್ತು ಝಪೋರಿಜಿಯಾದಲ್ಲಿ ಮಾತುಕತೆಯ ಬಳಿಕ ರಶ್ಯ ಕೆಲವು ಪ್ರದೇಶಗಳನ್ನು ಉಕ್ರೇನ್‌ ಗೆ ಹಿಂತಿರುಗಿಸಲಿದೆ.

2014ರಲ್ಲಿ ಮಿಲಿಟರಿ ಆಕ್ರಮಣದ ಅಡಿಯಲ್ಲಿ ನಡೆದ ಜನಾಭಿಪ್ರಾಯ ಸಂಗ್ರಹಣೆಯ ನಂತರ ರಶ್ಯಾ ಕ್ರಿಮಿಯಾವನ್ನು ಸ್ವಾಧೀನಪಡಿಸಿಕೊಂಡಂದಿನಿಂದಲೂ ಈ ಭೂಪ್ರದೇಶ ಬಿಕ್ಕಟ್ಟಿನ ಕೇಂದ್ರ ಬಿಂದುವಾಗಿದೆ. ರಶ್ಯದ ನಡೆಯನ್ನು ಉಕ್ರೇನ್ ಮತ್ತು ಹೆಚ್ಚಿನ ಪಾಶ್ಚಿಮಾತ್ಯ ಸರಕಾರಗಳು ಖಂಡಿಸಿದ್ದರೆ, ಕ್ರಿಮಿಯಾವನ್ನು ರಶ್ಯಾದ ಒಕ್ಕೂಟಕ್ಕೆ ಸಂಪೂರ್ಣವಾಗಿ ಸಂಯೋಜಿಸಿರುವುದಾಗಿ ರಶ್ಯ ಪ್ರತಿಪಾದಿಸುತ್ತಿದೆ.

►ಉಕ್ರೇನ್ ವಿರೋಧ

ಈ ಯೋಜನೆಯು ರಶ್ಯದ `ಎಲ್ಲವೂ ತನಗೇ ಬೇಕೆಂಬ' ನಿಲುವನ್ನು ಪ್ರತಿಬಿಂಬಿಸಿದ್ದು ಇದನ್ನು ಪರಿಷ್ಕರಿಸಬೇಕು ಎಂದು ಉಕ್ರೇನ್ ಆಗ್ರಹಿಸಿದೆ.

ಈ ಮಧ್ಯೆ, ಅಮೆರಿಕಾ ಸೇನೆಯ ಕಾರ್ಯದರ್ಶಿ ಡೇನಿಯಲ್ ಡ್ರಿಸ್ಕೋಲ್ ಉಕ್ರೇನ್‌ ಗೆ ಗುರುವಾರ ಆಗಮಿಸಿದ್ದು ಯೋಜನೆಯ ಬಗ್ಗೆ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ಜೊತೆ ಚರ್ಚಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries