ಲಖಿಸರಾಯ್: ವಿರೋಧ ಪಕ್ಷದ ನಾಯಕರು ದೇಶ ಮತ್ತು ಬಿಹಾರವನ್ನು ಅವಮಾನಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪದೇ ಪದೇ ಆರೋಪ ಮಾಡುತ್ತಿರುವುದನ್ನು ಖಂಡಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, 'ಅಪಮಾನ್ ಮಂತ್ರಾಲಯ'(ಅವಮಾನಗಳ ಸಚಿವಾಲಯ) ಎಂಬ ಹೊಸ ಸಚಿವಾಲಯವನ್ನು ಸ್ಥಾಪಿಸಲಿ ಎಂದು ಸೋಮವಾರ ವ್ಯಂಗ್ಯವಾಡಿದ್ದಾರೆ.
ಸಹರ್ಸಾ ಮತ್ತು ಲಖಿಸರಾಯ್ ಜಿಲ್ಲೆಗಳಲ್ಲಿ ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಪ್ರಧಾನಿ ಮೋದಿ ತಮ್ಮ ವಿರೋಧಿಗಳನ್ನು ನಿರಂತರವಾಗಿ ಗುರಿಯಾಗಿಸಿಕೊಳ್ಳುವ ಮೂಲಕ ಅನಗತ್ಯ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದಾರೆ. ಬಿಹಾರದಲ್ಲಿ ನಿರುದ್ಯೋಗ, ಎನ್ ಡಿಎ ಸರ್ಕಾರ ಭ್ರಷ್ಟಾಚಾರ ಮತ್ತು ಬಡತನದಿಂದ ಸಾರ್ವಜನಿಕ ಗಮನವನ್ನು ಬೇರೆಡೆಗೆ ಸೆಳೆಯುತ್ತಿದ್ದಾರೆ ಎಂದು ಆರೋಪಿಸಿದರು.
"ಪ್ರಧಾನಿ ಮೋದಿ ಅಭಿವೃದ್ಧಿಯ ಬಗ್ಗೆ ಮಾತನಾಡುವ ಬದಲು, ಎಲ್ಲಾ ವಿರೋಧ ಪಕ್ಷದ ನಾಯಕರೂ ದೇಶವನ್ನು ಅವಮಾನಿಸುತ್ತಿದ್ದಾರೆ ಎಂದು ಆರೋಪಿಸುತ್ತಲೇ ಇದ್ದಾರೆ. ಹೀಗಾಗಿ ಅವರು 'ಅಪಮಾನ್ ಮಂತ್ರಾಲಯ' ಎಂಬ ಹೊಸ ಸಚಿವಾಲಯ ಸ್ಥಾಪಿಸಬೇಕು. ಏಕೆಂದರೆ ಅವರ ಸರ್ಕಾರವು ಅದರ ಮೇಲೆ ಹೆಚ್ಚು ಗಮನಹರಿಸುತ್ತಿದೆ" ಎಂದು ತಿರುಗೇಟು ನೀಡಿದರು.
ಕೇಂದ್ರದ ಅಗ್ನಿಪಥ್ ಯೋಜನೆ ದೇಶದ ಹಿತಾಸಕ್ತಿಗಾಗಲಿ ಅಥವಾ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಬಯಸುವ ಯುವ ಪೀಳಿಗೆಗಾಗಲಿ ಅಲ್ಲ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದರು.
"ಅಗ್ನಿಪಥ್ ಯೋಜನೆ ಯುವಕರ ಅಥವಾ ದೇಶದ ಹಿತಾಸಕ್ತಿಗಾಗಿ ಅಲ್ಲ. ಭಾರತಕ್ಕೆ ಸೇವೆ ಸಲ್ಲಿಸುವ ಕನಸು ಕಾಣುವ ಲಕ್ಷಾಂತರ ಯುವಕರ ಭವಿಷ್ಯದೊಂದಿಗೆ ಸರ್ಕಾರ ಏಕೆ ಆಟವಾಡುತ್ತಿದೆ ಎಂದು ಉತ್ತರಿಸಬೇಕು. ಈ ಎನ್‌ಡಿಎ ಸರ್ಕಾರ ಯಾರ ಹಿತಾಸಕ್ತಿಗಾಗಿ ಸೇವೆ ಸಲ್ಲಿಸಲು ಪ್ರಯತ್ನಿಸುತ್ತಿದೆ?" ಎಂದು ಪ್ರಶ್ನಿಸಿದರು.
ಚುನಾವಣೆಯ ಸಂದರ್ಭದಲ್ಲಿ ಭರವಸೆಗಳನ್ನು ನೀಡುವ ಮುನ್ನ ಕಳೆದ 20 ವರ್ಷಗಳಲ್ಲಿ ಎನ್ ಡಿಎ ಸರ್ಕಾರ ಬಿಹಾರಕ್ಕೆ ಏನನ್ನೂ ಮಾಡಿದ ಎಂಬುದನ್ನು ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉತ್ತರಿಸಬೇಕು ಎಂದು ಕಾಂಗ್ರೆಸ್ ನಾಯಕಿ ಆಗ್ರಹಿಸಿದರು.




