HEALTH TIPS

ಡಿಜಿಟಲ್ ಅರೆಸ್ಟ್ ವಂಚನೆ ಪ್ರಮಾಣದ ಬಗ್ಗೆ ಆಘಾತ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್; ಕಠಿಣ ಕ್ರಮದ ಭರವಸೆ

ನವದೆಹಲಿ: ಡಿಜಿಟಲ್ ಅರೆಸ್ಟ್ ಹಗರಣಗಳ ವಿರುದ್ಧ ಕಠಿಣ ಕ್ರಮ ಅಗತ್ಯವಾಗಿದೆ ಎಂದು ಸೋಮವಾರ ಹೇಳಿದ ಸರ್ವೋಚ್ಚ ನ್ಯಾಯಾಲಯವು,ಆಡಿಯೊ ಮತ್ತು ವೀಡಿಯೊ ಕರೆಗಳನ್ನು ಮಾಡಿ ಹಿರಿಯ ನಾಗರಿಕರು ಸೇರಿದಂತೆ ಬಲಿಪಶುಗಳನ್ನು ಬೆದರಿಸಿ ಅವರಿಂದ ಹಣವನ್ನು ದೋಚುವ ಸೈಬರ್ ಅಪರಾಧಗಳ ಪ್ರಮಾಣದ ಬಗ್ಗೆ ತೀವ್ರ ಕಳವಳಗಳನ್ನು ವ್ಯಕ್ತಪಡಿಸಿತು.

ಇಂತಹ ವಂಚನೆಗಳ ಮೂಲಕ ದೇಶಾದ್ಯಂತ ಅಮಾಯಕರಿಂದ 3,000 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಲೂಟಿ ಮಾಡಲಾಗಿದೆ ಎಂದು ಗೃಹ ಸಚಿವಾಲಯ ಮತ್ತು ಸಿಬಿಐ ಸೀಲ್ ಮಾಡಿದ್ದ ಲಕೋಟೆಗಳಲ್ಲಿ ಸಲ್ಲಿಸಿದ್ದ ವರದಿಗಳನ್ನು ಉಲ್ಲೇಖಿಸಿ ನ್ಯಾಯಾಲಯವು ಹೇಳಿತು.

'ದೇಶಾದ್ಯಂತ ಹಿರಿಯ ನಾಗರಿಕರು ಸೇರಿದಂತೆ ಬಲಿಪಶುಗಳಿಂದ 3,000 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ದೋಚಿರುವುದು ಆಘಾತಕಾರಿಯಾಗಿದೆ. ನಾವು ಈಗ ಕಟ್ಟುನಿಟ್ಟಿನ ಮತ್ತು ಕಠಿಣ ಆದೇಶಗಳನ್ನು ಹೊರಡಿಸದಿದ್ದರೆ ಈ ಸಮಸ್ಯೆಯು ಇನ್ನೂ ದೊಡ್ಡದಾಗುತ್ತದೆ. ನಮ್ಮ ಕಾನೂನು ಜಾರಿ ಸಂಸ್ಥೆಗಳ ಕೈಗಳನ್ನು ನಾವು ಬಲಪಡಿಸಬೇಕಿದೆ. ಈ ಅಪರಾಧಗಳ ವಿರುದ್ಧ ಕಠಿಣ ಕ್ರಮಕ್ಕಾಗಿ ನಾವು ದೃಢನಿರ್ಧಾರ ಮಾಡಿದ್ದೇವೆ' ಎಂದು ನ್ಯಾ.ಸೂರ್ಯಕಾಂತ್ ಅವರ ಪೀಠವು ಹೇಳಿತು.

ಈ ವಿಷಯದಲ್ಲಿ ನ್ಯಾಯಾಲಯಕ್ಕೆ ನೆರವಾಗಲು ಹಿರಿಯ ವಕೀಲ ಎನ್.ಎಸ್.ನಪ್ಪಿನೈ ಅವರನ್ನು ಅಮಿಕಸ್ ಕ್ಯೂರೆ ಆಗಿ ನೇಮಕಗೊಳಿಸಿದ ಪೀಠವು, ಮುಂದಿನ ವಿಚಾರಣೆಯನ್ನು ನ.10ಕ್ಕೆ ನಿಗದಿಗೊಳಿಸಿತು. ಸ್ವೀಕೃತ ಸಲಹೆಗಳ ಆಧಾರದಲ್ಲಿ ನಿರ್ದೇಶನಗಳನ್ನು ನೀಡುವುದಾಗಿಯೂ ಅದು ತಿಳಿಸಿತು.

ವಿದೇಶಿ ಅಪರಾಧ ಜಾಲಗಳು ಹಣಕಾಸು, ತಾಂತ್ರಿಕ ಮತ್ತು ಕಾರ್ಯಾಚರಣೆ ಘಟಕಗಳೊಂದಿಗೆ ಈ ವಂಚನೆಗಳನ್ನು ನಡೆಸುತ್ತಿವೆ ಎನ್ನುವುದನ್ನು ಸಿಬಿಐ ವರದಿ ಸೂಚಿಸಿದೆ ಎಂದು ನ್ಯಾ.ಸೂರ್ಯಕಾಂತ ಹೇಳಿದರು.

ಕೇಂದ್ರ ಮತ್ತು ಸಿಬಿಐ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ಗೃಹ ಸಚಿವಾಲಯದ ಸೈಬರ್ ಅಪರಾಧ ವಿಭಾಗವು ಈಗಾಗಲೇ ಅಂತಹ ಪ್ರಕರಣಗಳನ್ನು ಪರಿಶೀಲಿಸುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ತನ್ನನ್ನು ಮತ್ತು ತನ್ನ ಪತಿಯನ್ನು ಡಿಜಿಟಲ್ ಬಂಧನಕ್ಕೆ ಒಳಪಡಿಸಲಾಗಿತ್ತು ಮತ್ತು 1.05 ಕೋಟಿ ರೂಪಾಯಿಗಳನ್ನು ಪಾವತಿಸುವಂತೆ ತಮ್ಮನ್ನು ಬಲವಂತಗೊಳಿಸಲಾಗಿತ್ತು ಎಂದು ಆರೋಪಿಸಿ ಹರ್ಯಾಣದ ಅಂಬಾಲಾ ನಿವಾಸಿ ವೃದ್ಧ ಮಹಿಳೆಯಿಂದ ಪತ್ರವನ್ನು ಸ್ವೀಕರಿಸಿದ ಬಳಿಕ ಸರ್ವೋಚ್ಚ ನ್ಯಾಯಾಲಯವು ಈ ವಂಚನೆ ಕುರಿತು ವಿಚಾರಣೆಯನ್ನು ಆರಂಭಿಸಿತ್ತು.

ಭಾರತೀಯ ನ್ಯಾಯ ಸಂಹಿತಾದ ಅಡಿ ಅಂಬಾಲಾದಲ್ಲಿ ಎರಡು ಎಫ್‌ಐಆರ್‌ ಗಳು ದಾಖಲಾಗಿವೆ.

ಸರ್ವೋಚ್ಚ ನ್ಯಾಯಾಲಯವು ಅ.27ರಂದು ಸೈಬರ್ ಅಪರಾಧಗಳು ದೇಶಾದ್ಯಂತ ವ್ಯಾಪಿಸಿರುವುದನ್ನು ಉಲ್ಲೇಖಿಸಿ,ತನಿಖೆಯನ್ನು ಸಿಬಿಐಗೆ ಒಪ್ಪಿಸಲು ತಾನು ಒಲವು ಹೊಂದಿರುವುದಾಗಿ ತಿಳಿಸಿತ್ತು.

ಅದಕ್ಕೂ ಮುನ್ನ ಅ.17ರಂದು ಇಂತಹ ಪ್ರಕರಣಗಳಲ್ಲಿ ಹೆಚ್ಚಳವನ್ನು ಗಮನಿಸಿದ್ದ ಪೀಠವು ಕೇಂದ್ರ ಮತ್ತು ಸಿಬಿಐನಿಂದ ಉತ್ತರಗಳನ್ನು ಕೋರಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries