ಜೊಹಾನಸ್‌ಬರ್ಗ್: ಜಿ-20 ನಾಯಕರ ಶೃಂಗಸಭೆಯಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಭೇಟಿಯಾಗಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ಮೋದಿ, 'ಜಿ20 ನಾಯಕರ ಶೃಂಗದಲ್ಲಿ ಮ್ಯಾಕ್ರನ್ ಅವರನ್ನು ಭೇಟಿಯಾಗಿರುವುದು ಸಂತಸ ತಂದಿದೆ.
ನಾವು ವಿಭಿನ್ನ ವಿಷಯಗಳ ಕುರಿತು ವಿಚಾರಗಳನ್ನು ವಿನಿಮಯ ಮಾಡಿದ್ದೆವು. ಜಾಗತಿಕ ಒಳಿತಿಗಾಗಿ ಪ್ರಬಲ ಶಕ್ತಿಗಳಾಗಿ ಭಾರತ-ಫ್ರಾನ್ಸ್ ಬಾಂಧವ್ಯ ಉಳಿದುಕೊಳ್ಳಲಿದೆ' ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರ ಪೋಸ್ಟ್‌ಗೆ ಧನ್ಯವಾದ ಹೇಳಿರುವ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್, 'ಉಭಯ ರಾಷ್ಟ್ರಗಳು ಒಗ್ಗಟ್ಟಾಗಿ ಮುಂದೆ ಸಾಗಿದಾಗ ಬಲಶಾಲಿಯಾಗುತ್ತವೆ. ನಮ್ಮ ದೇಶಗಳ ನಡುವಣ ಸ್ನೇಹ ಚಿರಾಯುವಾಗಲಿ' ಎಂದು ಹೇಳಿದ್ದಾರೆ.
ಜಿ20 ಶೃಂಗದ ವೇಳೆ ವಿವಿಧ ದೇಶಗಳ ನಾಯಕರೊಂದಿಗೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಈ ಸಂಬಂಧ ಮಾಹಿತಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.




