ಚಂಡೀಗಢ: ಹರ್ಯಾಣ ಮುಖ್ಯ ಚುನಾವಣಾ ಅಧಿಕಾರಿಯವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಮತ್ತೊಮ್ಮೆ ನೋಟಿಸ್ ನೀಡಿದ್ದು, ರಾಜ್ಯದ ಮತದಾರರ ಪಟ್ಟಿಯಲ್ಲಿ ತಿರುಚಲಾಗಿದೆ ಎಂಬ ತಮ್ಮ ಆರೋಪಗಳನ್ನು ಪ್ರಮಾಣದಡಿಯಲ್ಲಿ ಆರೋಪಗಳನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.
2024ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ವ್ಯಾಪಕ ಮತಗಳ್ಳತನ ನಡೆದಿದೆ ಎಂದು ರಾಹುಲ್ ಗಾಂಧಿಯವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು.
ಚುನಾವಣೆಗೆ ಮುನ್ನ ಸುಮಾರು 25 ಲಕ್ಷ ನಕಲಿ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಅವರು ಹೇಳಿದ್ದರು.
ಈ ಹೇಳಿಕೆಗಳ ನಂತರ, "ರಾಹುಲ್ ಗಾಂಧಿಯವರ ಹೇಳಿಕೆಗಳಿಗೆ ಶೀಘ್ರದಲ್ಲೇ ವಿವರವಾದ ಪ್ರತಿಕ್ರಿಯೆ ನೀಡಲಾಗುವುದು" ಎಂದು ಹರ್ಯಾಣ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿತ್ತು. ಕೆಲವು ಗಂಟೆಗಳ ಬಳಿಕ ಆಯೋಗವು ಆಗಸ್ಟ್ 9ರಂದು ಬರೆದಿದ್ದ ಹಿಂದಿನ ಪತ್ರವನ್ನೂ ಮರುಪೋಸ್ಟ್ ಮಾಡಿತು.
ಆ ಪತ್ರದಲ್ಲಿ, ಗಾಂಧಿಯವರು ಪತ್ರಿಕಾಗೋಷ್ಠಿಯ ವೇಳೆ ಅನರ್ಹ ಮತದಾರರನ್ನು ಸೇರಿಸುವ ಮತ್ತು ಅರ್ಹ ಮತದಾರರನ್ನು ಹೊರಗಿಡುವ ವಿಷಯ ಉಲ್ಲೇಖಿಸಿದ್ದೀರಿ ಎಂದು ಹೇಳಿ, 1960ರ ಮತದಾರರ ನೋಂದಣಿ ನಿಯಮಗಳ ನಿಯಮ 20(3)(b) ಅಡಿಯಲ್ಲಿ ಪ್ರಮಾಣ ಮಾಡಿ ಎಂದು ರಾಹುಲ್ ಗಾಂಧಿ ಅವರಿಗೆ ತಿಳಿಸಲಾಗಿದೆ.
ಈ ನಿಯಮದ ಪ್ರಕಾರ, ಮತದಾರರ ಪಟ್ಟಿಗೆ ಸಂಬಂಧಿಸಿದ ಆಕ್ಷೇಪಣೆ ಅಥವಾ ದೂರು ಸಲ್ಲಿಸುವವರು ಪ್ರಮಾಣದ ಮೇಲೆ ಪುರಾವೆಗಳನ್ನು ನೀಡಬೇಕಾಗುತ್ತದೆ.
ಗಾಂಧಿಯವರು ಈ ಮೊದಲು ಕರ್ನಾಟಕದ ಆಳಂದ ಮತ್ತು ಮಹದೇವಪುರ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮಗಳಿವೆ ಎಂದು ಆರೋಪಿಸಿದ್ದರು. ಆದರೆ, ಚುನಾವಣಾ ಆಯೋಗವು ಅವುಗಳನ್ನು ತಿರಸ್ಕರಿಸಿತ್ತು.
ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳಲ್ಲಿಯೂ ಇದೇ ರೀತಿಯ ಆರೋಪಗಳನ್ನು ರಾಹುಲ್ ಗಾಂಧಿ ಮಾಡಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ್ದ ಚುನಾವಣಾ ಆಯೋಗವು, ಮತದಾರರ ಪಟ್ಟಿಗಳನ್ನು ಪಾರದರ್ಶಕವಾಗಿ ತಯಾರಿಸಲಾಗುತ್ತಿದ್ದು, ಚುನಾವಣಾ ಪ್ರಕ್ರಿಯೆ ಅಥವಾ ಫಲಿತಾಂಶದ ಕುರಿತು ಯಾವುದೇ ಆಕ್ಷೇಪಣೆಗಳನ್ನು ಹೈಕೋರ್ಟ್‌ನಲ್ಲಿ ಚುನಾವಣಾ ಅರ್ಜಿ ಮೂಲಕ ಮಾತ್ರ ಪ್ರಶ್ನಿಸಬಹುದು ಎಂದು ಸ್ಪಷ್ಟಪಡಿಸಿದೆ.




