ಭಾನುವಾರ ನವಿ ಮುಂಬೈನಲ್ಲಿ ನಡೆದ ಫೈನಲ್ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು 52 ರನ್ ಅಂತರಿಂದ ಸೋಲಿಸಿ ಚೊಚ್ಚಲ ವಿಶ್ವಕಪ್ ಗೆ ಮುತ್ತಿಕ್ಕಿದ ಬಳಿಕ ಎಕ್ಸ್ ಸಂವಾದ ಭಾರಿ ಏರಿಕೆ ಕಂಡಿದೆ.
ಎಕ್ಸ್ ಜಾಲತಾಣದ ಭಾರತ ವಿಭಾಗದ ಅಧಿಕೃತ ಹ್ಯಾಂಡಲ್ ಭಾರತದ ಐತಿಹಾಸಿಕ ಗೆಲುವನ್ನು ಅಭಿನಂದಿಸಿದ್ದು, ಇದು ಗೆಲುವಿನ ಸುತ್ತ ಆನ್ಲೈನ್ ನಲ್ಲಿ ದೊಡ್ಡ ಸಂವಾದವನ್ನು ಹುಟ್ಟುಹಾಕಿದೆ.
ಭಾರತದ ಕ್ರಿಕೆಟ್ ಐಕಾನ್ ವಿರಾಟ್ ಕೊಹ್ಲಿಯವರ ಪೋಸ್ಟ್ ಅನ್ನು ಎಕ್ಸ್ ನಲ್ಲಿ ಉಲ್ಲೇಖಿಸಲಾಗಿದೆ. "ಭಾರತ ತಂಡದ ಗೆಲುವು ಪ್ರತಿಯೊಬ್ಬರ ಭಾರತೀಯರು ಹೆಮ್ಮೆಪಡುವಂತೆ ಮಾಡಿದ್ದು, ಸರ್ವತ್ರ ಶ್ಲಾಘನೆಗೆ ಅರ್ಹ" ಎಂದು ಕೊಹ್ಲಿ ಪೋಸ್ಟ್ ಮಾಡಿದ್ದರು. ಭಾರತೀಯ ತಂಡದ ನಿರ್ಭೀತ ಕ್ರಿಕೆಟ್ ಮತ್ತು ಸರ್ವತ್ರ ನಂಬಿಕೆಯನ್ನು ಗುಣಗಾನ ಮಾಡಿರುವ ಕೊಹ್ಲಿ, "ಇದು ಮುಂದಿನ ಪೀಳಿಗೆಗಳಿಗೆ ಸ್ಫೂರ್ತಿ" ಎಂದು ಬಣ್ಣಿಸಿದ್ದರು.
ತಂತ್ರಜ್ಞಾನ ಕ್ಷೇತ್ರದ ದಿಗ್ಗಜರು ಕೂಡಾ ಭಾರತದ ಗೆಲುವಿನ ಸಂಭ್ರಮದಲ್ಲಿ ಕೈಜೋಡಿಸಿದ್ದು, ಗೂಗಲ್ ಸಿಇಓ ಸುಂದರ್ ಪಿಚ್ಚೈ ಭಾರತದ ಪುರುಷರ ತಂಡದ ವಿಶ್ವಕಪ್ ಗೆಲುವಿಗೆ ಹೋಲಿಸಿದ್ದಾರೆ. ಈ ರೋಚಕ ಗೆಲುವು 1983 ಮತ್ತು 2011ರ ಫೈನಲ್ ನೆನಪನ್ನು ಮರುಕಳಿಸುವಂತೆ ಮಾಡಿದೆ ಎಂದು ವಿಶ್ಲೇಷಿಸಿದ್ದಾರೆ.
ಮೈಕ್ರೋಸಾಫ್ಟ್ ಸಿಇಓ ಸತ್ಯ ನಾದೆಲ್ಲಾ ಅವರು "ದಂತಕಥೆಗಳ ಜನನ" ಎಂದು ಬಣ್ಣಿಸಿ, ಫೈನಲ್ ತಲುಪಿದ ಉಭಯ ತಂಡಗಳನ್ನು ಅಭಿನಂದಿಸಿದ್ದಾರೆ.
ಭಾರತ ತಂಡದ ಗೆಲುವಿನ ಬಳಿಕ ದೇಶದಲ್ಲಿ ಎಕ್ಸ್ ಜಾಲತಾಣ ಸಂವಾದದಲ್ಲಿ ಶೇಕಡ 456.5ರಷ್ಟು ಏರಿಕೆಯಾಗಿದೆ. 2005 ಮತ್ತು 2017ರಲ್ಲಿ ಫೈನಲ್ ಪ್ರವೇಶಿಸಿದ್ದ ಭಾರತ, ಇದೀಗ 2025ರಲ್ಲಿ ಹರ್ಮನ್ ಪ್ರೀತ್ ಕೌರ್ ನೇತೃತ್ವದಲ್ಲಿ ವಿಶ್ವಕಪ್ ಗೆದ್ದಿದೆ.




