ಶ್ರೀನಗರ: ʼವೈಟ್ ಕಾಲರ್ ಭಯೋತ್ಪಾದಕ ಜಾಲʼ ಮತ್ತು ಕೆಂಪು ಕೋಟೆ ಬಳಿ ನಡೆದ ಸ್ಫೋಟ ಪ್ರಕರಣದ ಬಗ್ಗೆ ತನಿಖೆ ತೀವ್ರವಾಗುತ್ತಿದ್ದಂತೆ ಕೇಂದ್ರಾಡಳಿತ ಪ್ರದೇಶದ ಹೊರಗೆ ಅಧ್ಯಯನ ಮಾಡುತ್ತಿರುವ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಕಿರುಕುಳ, ಸಾಮಾಜಿಕವಾಗಿ ಪ್ರತ್ಯೇಕತೆ ಹೆಚ್ಚಳವಾಗಿದೆ ಎಂದು deccanherald.com ವರದಿ ಮಾಡಿದೆ.
ಈ ಬೆಳವಣಿಗೆ ಬಗ್ಗೆ ಕಾಶ್ಮೀರದ ಪ್ರಮುಖ ರಾಜಕೀಯ ನಾಯಕರು, ನಾಗರಿಕ ಸಂಘಟನೆಗಳು ವಿರೋಧವನ್ನು ವ್ಯಕ್ತಪಡಿಸಿದೆ.
ಇಬ್ಬರು ಕಾಶ್ಮೀರಿ ವೈದ್ಯರ ಬಂಧನದ ನಂತರ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಓದುತ್ತಿರುವ ಕಾಶ್ಮೀರಿ ವಿದ್ಯಾರ್ಥಿಗಳು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಭದ್ರತಾ ತಪಾಸಣೆಗಳಲ್ಲದೆ ನಮಗೆ ದೈನಂದಿನವಾಗಿ ತಾರತಮ್ಯ ಮಾಡಲಾಗುತ್ತಿದೆ ಮತ್ತು ನಮ್ಮನ್ನು ಶಂಕೆಯಿಂದ ನೋಡಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಸ್ಥಳೀಯ ಅಂಗಡಿಗಳಲ್ಲಿ ನಮಗೆ ದಿನಸಿ ವಸ್ತುಗಳನ್ನು ನಿರಾಕರಿಸಲಾಗಿದೆ ಎಂದು ಹಲವಾರು ಕಾಶ್ಮೀರಿ ವಿದ್ಯಾರ್ಥಿಗಳು ತಮ್ಮ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಇನ್ನು ಕೆಲವರು ದಿಲ್ಲಿ ಸ್ಫೋಟದ ನಂತರ ನಮ್ಮ ಕುಟುಂಬಗಳಿಗೆ "ಭಯೋತ್ಪಾದನಾ ಜಾಲದ ಜೊತೆ ಸಂಬಂಧ" ಇದೆ ಎಂದು ಸಹಪಾಠಿಗಳು ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ. ಮನೆ ಮಾಲಕರು, ಗೆಳೆಯರು ಮತ್ತು ನೆರೆಹೊರೆಯವರು ನಮ್ಮನ್ನು ನೋಡುವ ದೃಷ್ಠಿಯಲ್ಲಿ ಹಠಾತ್ ಬದಲಾವಣೆಯಾಗಿದೆ ಎಂದು ಕೆಲ ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ.
ಫರಿದಾಬಾದ್ ಒಂದರಲ್ಲೇ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ 2,000ಕ್ಕೂ ಹೆಚ್ಚು ಕಾಶ್ಮೀರಿ ವಿದ್ಯಾರ್ಥಿಗಳನ್ನು ಭಯೋತ್ಪಾದಕ ಜಾಲದ ಜೊತೆಗೆ ಯಾವುದೇ ಸಂಭಾವ್ಯ ಸಂಪರ್ಕ ಇದೆಯಾ ಎಂದು ಪರಿಶೀಲಿಸಲು ಸ್ಥಳೀಯ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಭದ್ರತೆಯ ಹೆಸರಿನಲ್ಲಿ ನಡೆಸಿದ ಈ ಕ್ರಮವು ನಮ್ಮನ್ನು ಒಂಟಿ ಮತ್ತು ದುರ್ಬಲರು ಎಂದು ಭಾವಿಸುವಂತೆ ಮಾಡಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿಗಳ ಮೇಲೆ ಹೆಚ್ಚುತ್ತಿರುವ ಕಿರುಕುಳ ಮತ್ತು ಅನುಮಾನದ ಬಗ್ಗೆ ನಾಗರಿಕ ಸಂಘಟನೆಗಳು ಮತ್ತು ಪ್ರಮುಖ ರಾಜಕೀಯ ನಾಯಕರು ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ದಿಲ್ಲಿ ಸ್ಫೋಟಕ್ಕೆ ಕಾರಣರಾಗಿರುವ ಎಲ್ಲರ ಮೇಲೂ ಕಠಿಣ ಕ್ರಮ ಕೈಗೊಳ್ಳಬೇಕು. ಆದರೆ ಇದರ ಹೆಸರಿನಲ್ಲಿ ಅಮಾಯಕ ನಾಗರಿಕರನ್ನು ಅನುಮಾನದಲ್ಲಿ ನೋಡುವುದನ್ನು ತಪ್ಪಿಸಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಕೂಡ ಆಪಾದಿತ ಕಿರುಕುಳವನ್ನು ಖಂಡಿಸಿದ್ದಾರೆ. ಒಬ್ಬರು ಮಾಡಿದ ತಪ್ಪಿಗೆ ಲಕ್ಷಾಂತರ ಕಾಶ್ಮೀರಿಗಳನ್ನು ಸಂಕಷ್ಟಕ್ಕೆ ಒಳಪಡುವಂತೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.




