HEALTH TIPS

ಪ್ರತಿ ನಾಲ್ವರು ಪತ್ರಕರ್ತೆಯರಲ್ಲಿ ಮೂವರು ಆನ್‌ಲೈನ್ ಹಿಂಸಾಚಾರವನ್ನು ಎದುರಿಸುತ್ತಿದ್ದಾರೆ : ಯುನೆಸ್ಕೋ

ವಾಷಿಂಗ್ಟನ್: ಸುಮಾರು ಶೇ.75ರಷ್ಟು ಪತ್ರಕರ್ತೆಯರು ಆನ್‌ಲೈನ್ ಹಿಂಸಾಚಾರವನ್ನು ಎದುರಿಸಿದ್ದು, ಈಗ ಡೀಪ್‌ಫೇಕ್‌ಗಳಿಂದ ಹಿಡಿದು ಡಾಕ್ಸಿಂಗ್‌ವರೆಗಿನ (ಒಬ್ಬರ ಖಾಸಗಿ ಮಾಹಿತಿಗಳನ್ನು ಅವರ ಅನುಮತಿಯಿಲ್ಲದೆ ಬಹಿರಂಗಗೊಳಿಸುವುದು) ಬೆದರಿಕೆಗಳನ್ನು ಅಪಾಯಕಾರಿಯಾಗಿ ಹೆಚ್ಚಿಸಲು ಕೃತಕ ಬುದ್ಧಿಮತ್ತೆಯನ್ನು(ಎಐ) ಬಳಸಲಾಗುತ್ತಿದೆ ಎಂದು ಯುನೆಸ್ಕೋ ಎಚ್ಚರಿಕೆ ನೀಡಿದೆ.

ಸಮೀಕ್ಷೆಗೊಳಗಾದ ಪ್ರತಿ ನಾಲ್ವರು ಪತ್ರಕರ್ತೆಯರಲ್ಲಿ ಮೂವರು ದೈಹಿಕ ಅಥವಾ ಜೀವ ಬೆದರಿಕೆಗಳನ್ನು ಎದುರಿಸಿದ್ದಾರೆ ಎಂದು ಬಹಿರಂಗಗೊಳಿಸಿರುವ ಯುನೆಸ್ಕೋ, ಹೆಚ್ಚುತ್ತಿರುವ ಬೆದರಿಕೆಗಳನ್ನು ಎದುರಿಸಲು ಹೊಸ ಅಭಿಯಾನವೊಂದನ್ನು ಆರಂಭಿಸಿದೆ.

ಲಿಂಗ ಆಧಾರಿತ ತಪ್ಪು ಮಾಹಿತಿ, ಕಣ್ಗಾವಲು ಮತ್ತು ಉದ್ದೇಶಿತ ಕಿರುಕುಳವನ್ನು ಒಳಗೊಂಡಿರುವ ಈ ಆನ್‌ಲೈನ್ ಹಿಂಸಾಚಾರವನ್ನು ಮಹಿಳಾ ವರದಿಗಾರರ ಧ್ವನಿಯನ್ನಡಗಿಸಲು ಮತ್ತು ಅವರಿಗೆ ಅಪಖ್ಯಾತಿಯನ್ನುಂಟು ಮಾಡಲು ವಿನ್ಯಾಸಗೊಳಿಸಲಾಗಿದೆ. ಈ ಡಿಜಿಟಲ್ ದಾಳಿಗಳು ಭೌತಿಕ ಜಗತ್ತಿನಲ್ಲಿಯೂ ಹೆಚ್ಚಾಗಿ ಹರಡತೊಡಗಿದ್ದು, ಶೇ.14ರಷ್ಟು ಮಹಿಳೆಯರು ಆನ್‌ಲೈನ್ ಬೆದರಿಕೆಗಳಿಗೆ ಸಂಬಂಧಿಸಿದ ನೈಜ ಜಗತ್ತಿನ ಹಿಂಸೆಯನ್ನು ಎದುರಿಸಿದ್ದಾರೆ ಎನ್ನುವುದನ್ನು ಇತ್ತೀಚಿನ ಅಧ್ಯಯನವು ಕಂಡುಕೊಂಡಿದೆ ಎಂದು ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.

ಪತ್ರಕರ್ತರ ವಿರುದ್ಧ ಅಪರಾಧಗಳಿಗೆ ಶಿಕ್ಷೆಯನ್ನು ಖಚಿತಪಡಿಸಲು ಅಂತಾರಾಷ್ಟ್ರೀಯ ದಿನವಾಗಿರುವ ರವಿವಾರಕ್ಕೆ ಮುನ್ನ ಈ ಎಚ್ಚರಿಕೆ ಹೊರಬಿದ್ದಿದೆ.

ಸಮಸ್ಯೆಯು ಜಾಗತಿಕವಾಗಿದೆ. ಉಕ್ರೇನ್‌ನಲ್ಲಿ ಶೇ.81ರಷ್ಟು ಮತ್ತು ಝಿಂಬಾಬ್ವೆಯಲ್ಲಿ ಶೇ.63ರಷ್ಟು ಪತ್ರಕರ್ತೆಯರು ಆನ್‌ಲೈನ್ ಹಿಂಸಾಚಾರವನ್ನು ಅನುಭವಿಸಿದ್ದಾರೆ ಎನ್ನುವುದನ್ನು ಸಮೀಕ್ಷೆಯೊಂದು ಬೆಳಕಿಗೆ ತಂದಿದೆ. ಆಗಾಗ್ಗೆ ಈ ಬೆದರಿಕೆಗಳು ಕುಟುಂಬ ಸದಸ್ಯರಿಗೂ ವಿಸ್ತರಿಸುತ್ತವೆ ಮತ್ತು ಆಫ್‌ಲೈನ್ ಕಿರುಕುಳವಾಗಿ ಉಲ್ಬಣಗೊಳ್ಳುತ್ತವೆ.

ಯುನೆಸ್ಕೋದ ಅಭಿಯಾನ' CTRL+ALT+MUTE ' ನೀತಿ ಕ್ರಮ ಮತ್ತು ಬೆಂಬಲದ ಮೂಲಕ ಹೆಚ್ಚುತ್ತಿರುವ ಎಐ ಚಾಲಿತ ಬೆದರಿಕೆಗಳನ್ನು ಎದುರಿಸುವ ಗುರಿಯನ್ನು ಹೊಂದಿದೆ.

ಜನರೇಟಿವ್ ಎಐ ಹೆಚ್ಚು ಶಕ್ತಿಶಾಲಿಯಾಗುತ್ತಿದ್ದಂತೆ ಪತ್ರಕರ್ತೆಯರನ್ನು ಮೌನವಾಗಿಸುವ ಡಿಜಿಟಲ್ ಸಾಧನಗಳೂ ಬಲಗೊಳ್ಳುತ್ತಿವೆ. ಹೀಗಾಗಿ ಇದು ಎಲ್ಲ ಮಹಿಳೆಯರಿಗೂ ಆತಂಕಕಾರಿಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಯುನೆಸ್ಕೋ, ಎಲ್ಲರ ಅಭಿವ್ಯಕ್ತಿ ಸ್ವಾತಂತ್ರವನ್ನು ರಕ್ಷಿಸುವ ನಿಟ್ಟಿನಲ್ಲಿ ಮಾಧ್ಯಮ ಕ್ಷೇತ್ರದಲ್ಲಿಯ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸುವುದು ಅತ್ಯಗತ್ಯವಾಗಿದೆ ಎಂದು ಪ್ರತಿಪಾದಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries