HEALTH TIPS

ಹವಾಮಾನ ವಿಪತ್ತುಗಳಿಂದ ತೀವ್ರಪೀಡಿತ ದೇಶಗಳಲ್ಲಿ ಭಾರತಕ್ಕೆ ಒಂಭತ್ತನೇ ಸ್ಥಾನ!

ನವದೆಹಲಿ:  ಪರಿಸರ ಚಿಂತನ ಚಾವಡಿ ಜರ್ಮನ್ ವಾಚ್ ಮಂಗಳವಾರ ಬಿಡುಗಡೆಗೊಳಿಸಿರುವ ಇತ್ತೀಚಿನ ಹವಾಮಾನ ಅಪಾಯ ಸೂಚ್ಯಂಕ (ಸಿಆರ್‌ಐ) 2026ರ ಪ್ರಕಾರ,ಕಳೆದ ಮೂರು ದಶಕಗಳಲ್ಲಿ ಹವಾಮಾನ ಸಂಬಂಧಿತ ವೈಪರೀತ್ಯಗಳಿಂದ ಹೆಚ್ಚು ಪೀಡಿತ ದೇಶಗಳ ಪೈಕಿ ಭಾರತವು ಜಾಗತಿಕವಾಗಿ ಒಂಭತ್ತನೇ ಸ್ಥಾನದಲ್ಲಿದ್ದು, ಸುಮಾರು 430 ತೀವ್ರ ಸ್ವರೂಪದ ಹವಾಮಾನ ವಿಪತ್ತುಗಳಲ್ಲಿ ದೇಶದ 80,000ಕ್ಕೂ ಅಧಿಕ ಜನರು ಬಲಿಯಾಗಿದ್ದಾರೆ.

ಬ್ರೆಝಿಲ್ ನ ಬೆಲೆಮ್ ನಲ್ಲಿ ಸಿಒಪಿ30(30ನೇ ಕಾನ್ಫರೆನ್ಸ್ ಆಫ್ ಪಾರ್ಟೀಸ್) ಹವಾಮಾನ ಶೃಂಗಸಭೆಯಲ್ಲಿ ಮಂಗಳವಾರ ವರದಿಯನ್ನು ಬಿಡುಗಡೆಗೊಳಿಸಲಾಗಿದೆ.

1995ರಿಂದ 2024ರವರೆಗಿನ ಭಾರತದಲ್ಲಿಯ ಹವಾಮಾನ ವೈಪರೀತ್ಯ ಘಟನೆಗಳು ಸುಮಾರು 1.3 ಶತಕೋಟಿ ಜನರ ಬದುಕಿನ ಮೇಲೆ ಪರಿಣಾಮ ಬೀರಿದ್ದು, ಸುಮಾರು 170 ಶತಕೋಟಿ ಡಾಲರ್ ನಷ್ಟು ಆರ್ಥಿಕ ನಷ್ಟವನ್ನುಂಟು ಮಾಡಿವೆ ಎಂದು ಹೇಳಿರುವ ವರದಿಯು,ಜಾಗತಿಕ ತಾಪಮಾನ ಏರಿಕೆಯೊಂದಿಗೆ ದೇಶವು ಪ್ರವಾಹಗಳು,ಚಂಡಮಾರುತಗಳು, ಬರಗಾಲಗಳು ಮತ್ತು ಶಾಖದ ಅಲೆಗಳಂತಹ ಘಟನೆಗಳಿಗೆ ಪದೇ ಪದೇ ಸಾಕ್ಷಿಯಾಗಿದೆ ಎಂದಿದೆ.

1998ರ ಗುಜರಾತ್ ಚಂಡಮಾರುತ,1999ರ ಒಡಿಶಾದ ಸೂಪರ್ ಸೈಕ್ಲೋನ್, 2013ರ ಉತ್ತರಾಖಂಡ ಪ್ರವಾಹಗಳು ಮತ್ತು ಇತ್ತೀಚಿನ ತೀವ್ರ ಶಾಖದ ಅಲೆಗಳು ಹವಾಮಾನ ಅಪಾಯ ಸೂಚ್ಯಂಕದಲ್ಲಿ ಭಾರತವನ್ನು ಹತ್ತು ತೀವ್ರ ಪೀಡಿತ ದೇಶಗಳ ಗುಂಪಿನಲ್ಲಿರಿಸಿವೆ ಎಂದು ವರದಿಯು ಹೇಳಿದೆ.

ಭಾರತವು 'ನಿರಂತರ ಬೆದರಿಕೆ'ಯನ್ನು ಎದುರಿಸುತ್ತಿದೆ ಎಂದು ಬೆಟ್ಟು ಮಾಡಿರುವ ಜರ್ಮನ್ವಾಚ್, ಆಗಾಗ್ಗೆ ಸಂಭವಿಸುತ್ತಿರುವ ಹವಾಮಾನ ವೈಪರೀತ್ಯಗಳು ಅಭಿವೃದ್ಧಿಯ ಲಾಭಗಳನ್ನು ಕಿತ್ತುಕೊಂಡಿದ್ದು,ಜನರ ಜೀವನೋಪಾಯಗಳ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರಿವೆ ಎಂದು ಹೇಳಿದೆ. ಭಾರತದ ಭಾರೀ ಜನಸಂಖ್ಯೆ ಮತ್ತು ಮಳೆಯ ಮೇಲಿನ ಅವಲಂಬನೆ ಅದನ್ನು ವಿಶೇಷವಾಗಿ ದುರ್ಬಲಗೊಳಿಸಿದ್ದು,ಪ್ರತಿ ವರ್ಷ ಲಕ್ಷಾಂತರ ಜನರು ಪೀಡಿತರಾಗುತ್ತಿದ್ದಾರೆ ಎಂದು ಹೇಳಿರುವ ವರದಿಯು, 2024ರೊಂದರಲ್ಲೇ ಭಾರೀ ಮಳೆ ಮತ್ತು ದಿಢೀರ್ ಪ್ರವಾಹಗಳು ವಿಶೇಷವಾಗಿ ಗುಜರಾತ್,ಮಹಾರಾಷ್ಟ್ರ ಮತ್ತು ತ್ರಿಪುರಾಗಳಲ್ಲಿ 80 ಲಕ್ಷಕ್ಕೂ ಅಧಿಕ ಜನರ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡಿದ್ದವು ಎಂದಿದೆ.

ಜಾಗತಿಕವಾಗಿ ಕಳೆದ ವರ್ಷ ಪ್ರವಾಹಗಳು ಮತ್ತು ಬಿರುಗಾಳಿಗಳು ಅತ್ಯಂತ ಹಾನಿಕಾರಕ ಘಟನೆಗಳಾಗಿದ್ದು, ಪೀಡಿತರಲ್ಲಿ ಅರ್ಧಕ್ಕಿಂತ ಹೆಚ್ಚಿನ ಜನರು ಇವುಗಳ ವಿಕೋಪಕ್ಕೆ ಗುರಿಯಾಗಿದ್ದರು ಮತ್ತು ಕೋಟ್ಯಂತರ ಡಾಲರ್ಗಳಷ್ಟು ನಷ್ಟಕ್ಕೆ ಕಾರಣವಾಗಿದ್ದವು ಎಂದೂ ವರದಿಯು ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries