ಇಸ್ಲಾಮಾಬಾದ್: ಇಸ್ಲಾಮಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಆತ್ಮಾಹುತಿ ದಾಳಿಯ ಬಳಿಕ ಶ್ರೀಲಂಕಾದ ಕ್ರಿಕೆಟ್ ತಂಡ ಪ್ರವಾಸವನ್ನು ಕೊನೆಗೊಳಿಸಲು ಮುಂದಾಗಿದೆ. ಆದರೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಲಂಕಾ ಕ್ರಿಕೆಟಿಗರನ್ನು ಪ್ರವಾಸ ಕೊನೆಗೊಳಿಸದಂತೆ ಅಂಗಲಾಚಿ ಬೇಡಿಕೊಂಡಿದ್ದಾರೆ.
ಇಸ್ಲಾಮಾಬಾದ್‌ನಲ್ಲಿ ನಡೆದ ಆತ್ಮಾಹುತಿ ದಾಳಿಯ ನಂತರ ಭೇಟಿ ನೀಡಿದ್ದ ಶ್ರೀಲಂಕಾ ಕ್ರಿಕೆಟ್ ತಂಡದ ಪ್ರವಾಸವನ್ನು ಕೊನೆಗೊಳಿಸಲದಂತೆ ರಕ್ಷಿಸಲು ಪಾಕಿಸ್ತಾನದ ಸೇನಾ ಮುಖ್ಯಸ್ಥರು ನೇರವಾಗಿ ಮಧ್ಯಪ್ರವೇಶಿಸಿದ್ದಾರೆ ಎಂದು ಆಂತರಿಕ ಸಚಿವಾಲಯ ಗುರುವಾರ ತಿಳಿಸಿದೆ. ಆತ್ಮಾಹುತಿ ದಾಳಿಯ ನಂತರ ಶ್ರೀಲಂಕಾ ಕ್ರಿಕೆಟಿಗರು ಆಡಲು ಹಿಂಜರಿದ್ದು, ಫೀಲ್ಡ್ ಮಾರ್ಷಲ್ ಅಸಿಮ್ ಮುನಿರ್ ಶ್ರೀಲಂಕಾದ ಉನ್ನತ ಅಧಿಕಾರಿಗಳೊಂದಿಗೆ ಮಾತುಕತೆಗೆ ಮುಂದಾಗಿ ಅವರ ಮನವೊಲಿಸಲು ಪ್ರಯತ್ನಿಸಿದ್ದಾರೆ.
ಲಂಕಾ ಕ್ರಿಕೆಟಿಗರನ್ನು ಮನವೊಲಿಸಿದ ಬಳಿಕ ಶ್ರೀಲಂಕಾ ಕ್ರಿಕೆಟ್ ಮಂಡಳಿ ನಿನ್ನೆ ತಡರಾತ್ರಿ ಪಾಕಿಸ್ತಾನ ಪ್ರವಾಸ ಮುಂದುವರಿಸುವುದಾಗಿ ತಿಳಿಸಿದೆ. ನಮ್ಮ ಫೀಲ್ಡ್ ಮಾರ್ಷಲ್ ಸ್ವತಃ ಅವರ ರಕ್ಷಣಾ ಸಚಿವರು ಮತ್ತು ಕಾರ್ಯದರ್ಶಿಯೊಂದಿಗೆ ಮಾತನಾಡಿ, ಅವರನ್ನು ಮನವೊಲಿಸಿದರು ಮತ್ತು ಭದ್ರತೆಯನ್ನು ಒದಗಿಸುವ ಸಂಪೂರ್ಣ ಭರವಸೆ ನೀಡಿದರು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥರೂ ಆಗಿರುವ ನಖ್ವಿ ಸೆನೆಟ್ ನಲ್ಲಿ ಹೇಳಿದರು.
ಅವರೊಂದಿಗೆ ನಮ್ಮ ಸಂವಹನ ನಡೆದಿದ್ದು, ಅವರ ಮಂಡಳಿ, ಆಟಗಾರರು ಮತ್ತು ಎಲ್ಲರೂ ಇಲ್ಲಿಯೇ ಉಳಿಯಲು ಬಹಳ ಧೈರ್ಯದಿಂದ ನಿರ್ಧರಿಸಿದ್ದಾರೆ ಎಂದು ಪಿಸಿಬಿ ಅಧ್ಯಕ್ಷರು ಹೇಳಿದ್ದಾರೆ. ಅವರಿಗೆ ಘಟನೆಯ ಬಗ್ಗೆ ಹಲವು ಕಳವಳಗಳಿದ್ದವು. ಆದರೆ ನಾವು ಅವೆಲ್ಲವನ್ನೂ ನಿವಾರಿಸಲು ಪ್ರಯತ್ನಿಸಿದೆವು ಎಂದು ನಖ್ವಿ ಹೇಳಿದ್ದಾರೆ.
ವಿದೇಶಿ ಆಟಗಾರರಿಗೆ ಉನ್ನತ ಮಟ್ಟದ ಭದ್ರತೆಯನ್ನು ಒದಗಿಸಲಾಗುತ್ತಿದೆ. ಈಗ, ಪಾಕಿಸ್ತಾನ ಸೇನೆ, ರೇಂಜರ್ಸ್ ಮತ್ತು ಇಸ್ಲಾಮಾಬಾದ್ ಪೊಲೀಸರು ಒಟ್ಟಾಗಿ ಅವರ ಭದ್ರತೆಯನ್ನು ನಿರ್ವಹಿಸುತ್ತಿದ್ದಾರೆ. ಮತ್ತು ಅವರು ನಮ್ಮ ದೇಶದ ಅತಿಥಿಗಳಾಗಿರುವುದರಿಂದ ನಾವು ಅವರಿಗೆ ಅಷ್ಟೇ ಉನ್ನತ ಪ್ರೋಟೋಕಾಲ್ ಮತ್ತು ಭದ್ರತೆಯನ್ನು ಒದಗಿಸುತ್ತಿದ್ದೇವೆ ಎಂದು ಆಂತರಿಕ ಸಚಿವರು ಹೇಳಿದ್ದಾರೆ.
ಮಂಗಳವಾರ ಇಸ್ಲಾಮಾಬಾದ್‌ನಲ್ಲಿ ನಡೆದ ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ 12 ಜನರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಅಂತರರಾಷ್ಟ್ರೀಯ ಪಂದ್ಯ ರಾವಲ್ಪಿಂಡಿಯಲ್ಲಿ ಪ್ರಾರಂಭವಾಗುವುದಕ್ಕೂ ಸ್ವಲ್ಪವೇ ಮೊದಲು ಈ ದುರಂತ ಸಂಭವಿಸಿದೆ.
ಈ ಮೊದಲು 2009 ರಲ್ಲಿ ಲಾಹೋರ್‌ನ ಗಡಾಫಿ ಕ್ರೀಡಾಂಗಣಕ್ಕೆ ಶ್ರೀಲಂಕಾ ತಂಡವನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಉಗ್ರರು ದಾಳಿ ಮಾಡಿದ್ದರು. ಆಗ ಆರು ಪಾಕಿಸ್ತಾನಿ ಪೊಲೀಸ್ ಸಿಬ್ಬಂದಿ ಮತ್ತು ಇಬ್ಬರು ನಾಗರಿಕರು ಸಾವನ್ನಪ್ಪಿದ್ದರು. ಅದೃಷ್ಟವಶಾತ್ ಆರು ಕ್ರಿಕೆಟಿಗರು ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದರು.




