ಅಯೋಧ್ಯೆ: ಇಲ್ಲಿ ರಾಮಮಂದಿರ ನಿರ್ಮಾಣವಾಗುವ ಮೂಲಕ 500 ವರ್ಷಗಳ ಹಿಂದಿನ ಸಂಕಲ್ಪ ಈಡೇರಿದೆ. ಶತಮಾನಗಳ ಗಾಯ ಮತ್ತು ನೋವು ಶಮನವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ರಾಮಮಂದಿರದ ಕಾಮಗಾರಿಗಳು ಪೂರ್ಣಗೊಂಡಿರುವುದರ ದ್ಯೋತಕವಾಗಿ ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಧ್ವಜಾರೋಹಣ ನೆರವೇರಿಸಿದರು.
ಇದು ಹೊಸಯುಗದ ಆರಂಭ ಎಂದಿರುವ ಪ್ರಧಾನಿ ಮೋದಿ, ಅಯೋಧ್ಯೆ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಜತೆಗೆ ದೇಶ ಸೇರಿ ಇಡೀ ಜಗತ್ತು ರಾಮನಲ್ಲಿ ಲೀನವಾಗಿದೆ ಎಂದರು.
'ಸತ್ಯವು ಅಂತಿಮವಾಗಿ ಸುಳ್ಳಿನ ಮೇಲೆ ಜಯಗಳಿಸುತ್ತದೆ ಎನ್ನುವುದನ್ನು ಈ ಧ್ವಜ ಸೂಚಿಸುತ್ತದೆ. ನಮ್ಮ ರಾಮ ಎಂದಿಗೂ ಭೇದ ತೋರಿಸುವುದಿಲ್ಲ. ನಾವೂ ಅದೇ ಹಾದಿಯಲ್ಲಿ ಸಾಗೋಣ' ಎಂದು ಜನತೆಯನ್ನು ಒತ್ತಾಯಿಸಿದರು.
2047ಕ್ಕೆ ಭಾರತ ಸ್ವಾತಂತ್ರ್ಯ ಪಡೆದು 100 ವರ್ಷಗಳಾಗುತ್ತದೆ. ಅಷ್ಟರಲ್ಲಿ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು. ನಾವು ನಮ್ಮೊಳಗಿನ ರಾಮನನ್ನು ಜಾಗೃತಗೊಳಿಸಬೇಕು ಎಂದರು.
'ಹತ್ತು ಅಡಿ ಎತ್ತರ ಮತ್ತು 20 ಅಡಿ ಅಗಲವಿರುವ ತ್ರಿಕೋನಾಕೃತಿಯ ಧ್ವಜವು ಭಗವಾನ್ ರಾಮನ ಶೌರ್ಯ ಹಾಗೂ ಶಕ್ತಿಯನ್ನು ಬಿಂಬಿಸುವ ಪ್ರಕಾಶಮಾನ ಸೂರ್ಯನ ಚಿತ್ರವನ್ನು ಹೊಂದಿದೆ. ಕೋವಿದಾರ ಮರದೊಂದಿಗೆ 'ಓಂ' ಅನ್ನು ಚಿತ್ರಿಸಲಾಗಿದೆ'.




