ಗುವಾಹತಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಶೀಘ್ರವೇ ಗಲಭೆಪೀಡಿತ ಮಣಿಪುರಕ್ಕೆ ಭೇಟಿ ನೀಡಲಿದ್ದಾರೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಪ್ರಕಟಿಸಿದ್ದಾರೆ. ಅಂತೆಯೇ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಮತ್ತು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಈ ವಾರ ಮಣಿಪುರಕ್ಕೆ ಭೇಟಿ ನೀಡಲಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಮಣಿಪುರಕ್ಕೆ ಭೇಟಿ ನೀಡಿ ಆರು ಮಂದಿ ಬಿಜೆಪಿ ಶಾಸಕರನ್ನು ಭೇಟಿ ಮಾಡಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಸಂಭಾವ್ಯ ಮುಖ್ಯಮಂತ್ರಿ ಅಭ್ಯರ್ಥಿಗಳೆನಿಸಿದ ಆರು ಮಂದಿಯನ್ನು ಸಂತೋಷ್ ಭೇಟಿ ಮಾಡಿರುವುದು, ಫೆಬ್ರವರಿ 13ರಿಂದ ರಾಷ್ಟ್ರಪತಿ ಆಳ್ವಿಕೆಯಲ್ಲಿರುವ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗುವ ಬಗ್ಗೆ ವದಂತಿಗಳು ದಟ್ಟವಾಗಿ ಹಬ್ಬಲು ಕಾರಣವಾಗಿದೆ.
ಗಣ್ಯರ ಭೇಟಿ ಸಂಬಂಧ ಭದ್ರತಾ ವ್ಯವಸ್ಥೆಯ ಸಮನ್ವಯ ಮಾಡುತ್ತಿರುವ ಅಧಿಕಾರಿಗಳ ಪ್ರಕಾರ, ಭಾಗ್ವತ್ ಎರಡು ದಿನಗಳ ಭೇಟಿಗಾಗಿ ನ.20ರಂದು ಆಗಮಿಸಲಿದ್ದಾರೆ. ನಡ್ಡಾ ನ.21ರಂದು ಇಂಫಾಲಕ್ಕೆ ಆಗಮಿಸಲಿದ್ದಾರೆ. ಉಭಯ ಮುಖಂಡರು ಮಣಿಪುರಕ್ಕೆ ಭೇಟಿ ನೀಡುವುದು ಖಚಿತ. ಆದರೆ ಕಾರಣ ತಿಳಿದು ಬಂದಿಲ್ಲ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.




