ಮನಾಮ: ಗಾಝಾದಲ್ಲಿ ಯುದ್ಧಾನಂತರದ ಆಡಳಿತ ಯೋಜನೆಯಡಿಯಲ್ಲಿ ನಿಯೋಜನೆಗೊಳ್ಳುವ ನಿರೀಕ್ಷೆಯಿರುವ ಅಂತರಾಷ್ಟ್ರೀಯ ಪಡೆಗೆ ವಿಶ್ವಸಂಸ್ಥೆಯ ಅನುಮೋದನೆಯ ಅಗತ್ಯವಿದೆ ಎಂದು ಜೋರ್ಡಾನ್ ಮತ್ತು ಜರ್ಮನಿ ಶನಿವಾರ ಹೇಳಿವೆ.
ಹಮಾಸ್ ಮತ್ತು ಇಸ್ರೇಲ್ ನಡುವೆ ಅಮೆರಿಕಾ ಮಧ್ಯಸ್ಥಿಕೆಯಲ್ಲಿ ನಡೆದ ಕದನ ವಿರಾಮ ಒಪ್ಪಂದದ ಪ್ರಕಾರ, ಅಂತರಾಷ್ಟ್ರೀಯ ಪಡೆಯೊಂದನ್ನು (ಮುಖ್ಯವಾಗಿ ಅರಬ್ ಮತ್ತು ಮುಸ್ಲಿಮ್ ರಾಷ್ಟ್ರಗಳ ತುಕಡಿಯನ್ನು ಹೊಂದಿರುವ) ಫೆಲೆಸ್ತೀನಿಯನ್ ಪ್ರದೇಶದಲ್ಲಿ ನಿಯೋಜಿಸಲಾಗುತ್ತದೆ.
ಅಂತರಾಷ್ಟ್ರೀಯ ಸ್ಥಿರೀಕರಣ ಪಡೆ ಎಂದು ಕರೆಯಲ್ಪಡುವ ಈ ಮೈತ್ರಿಪಡೆಯು, ಈಜಿಪ್ಟ್ ಮತ್ತು ಜೋರ್ಡಾನ್ ನ ಬೆಂಬಲದೊಂದಿಗೆ ಗಾಝಾ ಪಟ್ಟಿಯಲ್ಲಿ `ಪರಿಶೀಲಿಸಿದ' ಫೆಲೆಸ್ತೀನಿಯನ್ ಪೊಲೀಸರಿಗೆ ತರಬೇತಿ ಮತ್ತು ಬೆಂಬಲವನ್ನು ನೀಡುವ ಜೊತೆಗೆ ಗಡಿ ಪ್ರದೇಶಗಳನ್ನು ಸುರಕ್ಷಿತಗೊಳಿಸಿ ಹಮಾಸ್‍ಗೆ ಶಸ್ತ್ರಾಸ್ತ್ರ ಕಳ್ಳಸಾಗಣೆಯನ್ನು ತಡೆಯುತ್ತದೆ. `ಅಂತರಾಷ್ಟ್ರೀಯ ಪಡೆಯು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿದ್ದರೆ ಅದು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಆದೇಶವನ್ನು ಹೊಂದಿರಬೇಕು ಎಂದು ನಾವೆಲ್ಲರೂ ಒಪ್ಪುತ್ತೇವೆ' ಎಂದು ಜೋರ್ಡಾನ್ ನ ವಿದೇಶಾಂಗ ಸಚಿವ ಅಯ್ಮಾನ್ ಸಫಾದಿ ಹೇಳಿದ್ದಾರೆ. ಜೋರ್ಡಾನ್ ಗಾಝಾ ಪಟ್ಟಿಗೆ ತನ್ನ ಪಡೆಗಳನ್ನು ಕಳುಹಿಸುತ್ತಿಲ್ಲ. ಆದರೆ ಅಂತರಾಷ್ಟ್ರೀಯ ಪಡೆಯೊಂದಿಗೆ ಸಹಕರಿಸಲು ತಮ್ಮ ದೇಶ ಸಿದ್ಧವಿದೆ ಎಂದು ಅವರು ಹೇಳಿದ್ದಾರೆ.
ಅಂತರಾಷ್ಟ್ರೀಯ ಪಡೆಗಳ ನಿಯೋಜನೆಗೆ ವಿಶ್ವಸಂಸ್ಥೆಯ ಆದೇಶದ ಅಗತ್ಯವಿದೆ ಎಂದು ಜರ್ಮನಿಯ ವಿದೇಶಾಂಗ ಸಚಿವ ಜೊಹಾನ್ ವಾಡೆಫುಲ್ ಕೂಡಾ ಹೇಳಿದ್ದು ಪಡೆಗಳ ನಿಯೋಜನೆಗೆ ಅಂತರಾಷ್ಟ್ರೀಯ ಕಾನೂನಿನಲ್ಲಿ ಸ್ಪಷ್ಟ ಆಧಾರ ಬೇಕು. ಗಾಝಾಕ್ಕೆ ಪಡೆಗಳನ್ನು ಕಳುಹಿಸಲು ಬಯಸುವ ರಾಷ್ಟ್ರಗಳಿಗೆ ಇದು ಅತ್ಯಂತ ಮಹತ್ವದ್ದಾಗಿದೆ ಎಂದು ಪ್ರತಿಪಾದಿಸಿದ್ದಾರೆ.
►ವಿಶ್ವಸಂಸ್ಥೆ ತಜ್ಞರ ಎಚ್ಚರಿಕೆ
ಸ್ಥಿರೀಕರಣ ಪಡೆಯ ಯೋಜನೆಗೆ ಕೆಲವರಿಂದ ಟೀಕೆ ವ್ಯಕ್ತವಾಗಿದ್ದು ಇದು ಫೆಲೆಸ್ತೀನಿಯನ್ ಸ್ವ-ನಿರ್ಣಯಕ್ಕೆ ವಿರುದ್ಧವಾಗಿದೆ ಮತ್ತು ಇಸ್ರೇಲಿ ಆಕ್ರಮಣದ ಬದಲು ಅಮೆರಿಕ ನೇತೃತ್ವದ ಆಕ್ರಮಣಕ್ಕೆ ದಾರಿ ಮಾಡಿಕೊಡಲಿದೆ ಎಂದು ವಿಶ್ವಸಂಸ್ಥೆಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ದಕ್ಷಿಣ ಲೆಬನಾನಿನಲ್ಲಿ `ಯುನಿಫಿಲ್' ಸೇರಿದಂತೆ ದಶಕಗಳಿಂದ ಈ ಪ್ರದೇಶದಲ್ಲಿ ಅಂತರಾಷ್ಟ್ರೀಯ ಶಾಂತಿಪಾಲನಾ ಪಡೆಗಳ ನಿಯೋಜನೆಗೆ ವಿಶ್ವಸಂಸ್ಥೆ ಆದೇಶಿಸಿದೆ.
ಗಾಝಾದಲ್ಲಿ ಅಂತರಾಷ್ಟ್ರೀಯ ಪಡೆಗೆ ಆರ್ಥಿಕ ನೆರವು ಎಲ್ಲಿಂದ ಬರುತ್ತದೆ ಮತ್ತು ಯಾವ ದೇಶಗಳು ತುಕಡಿಗಳನ್ನು ಕಳುಹಿಸುತ್ತವೆ ಎಂಬುದು ಅಸ್ಪಷ್ಟವಾಗಿಯೇ ಉಳಿದಿದೆ. ತುಕಡಿ ಕಳುಹಿಸಲು ಇಚ್ಛಿಸುವುದಾಗಿ ಇದುವರೆಗೆ ಇಂಡೋನೇಶ್ಯಾ ಮತ್ತು ಟರ್ಕಿ ಮಾತ್ರ ಹೇಳಿಕೆ ನೀಡಿವೆ. ಆದರೆ ಗಾಝಾದಲ್ಲಿ ಟರ್ಕಿ ಪಡೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಇಸ್ರೇಲ್ ಹೇಳಿದೆ.




