ಮೊದಲ ಮಾನವರಹಿತ ಯೋಜನೆಯಲ್ಲಿ, ಉಪಗ್ರಹವು ಅರೆ-ಮಾನವಾಕೃತಿ ರೋಬಟ್ 'ವ್ಯೋಮಿತ್ರ'ವನ್ನು ಬಾಹ್ಯಾಕಾಶಕ್ಕೆ ಒಯ್ಯಲಿದೆ ಎಂದು ಅವರು ಹೇಳಿದರು.
ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಎಲ್‌ವಿಎಮ್3-ಎಮ್5-ಸಿಎಮ್‌ಎಸ್-03 ಸಂಪರ್ಕೇ ಉಪಗ್ರಹದ ಯಶಸ್ವಿ ಉಡಾವಣೆಯ ಬಳಿಕ ಮಾತನಾಡಿದ ಅವರು, ಮುಂಬರುವ ತಿಂಗಳುಗಳಲ್ಲಿ ಇಂಥ ಹಲವಾರು ಉಡಾವಣೆಗಳು ಮತ್ತು ಪ್ರಯೋಗಗಳು ನಡೆಯಲಿವೆ ಎಂದರು.
ಗಗನಯಾನ ಯೋಜನೆಯಲ್ಲಿ ಅತ್ಯುತ್ತಮ ತಂಡಗಳು ಕೆಲಸ ಮಾಡುತ್ತಿವೆ ಮತ್ತು ಅವುಗಳು ನಿರೀಕ್ಷೆಯಂತೆ ನಿರಂತರ ಪ್ರಗತಿಯನ್ನು ಸಾಧಿಸುತ್ತಿವೆ ಎಂದು ನಾರಾಯಣನ್ ತಿಳಿಸಿದರು. ಈ ಯೋಜನೆಯ 90 ಶೇಕಡ ಕೆಲಸ ಪೂರ್ಣಗೊಂಡಿದೆ ಎಂದರು.
ಗಗನಯಾನದ ಸಿದ್ಧತೆಗಳ ಭಾಗವಾಗಿ, ಮೂರು ಮಾನವರಹಿತ ಯೋಜನೆಗಳ ಪೈಕಿ ಮೊದಲ ಉಡಾವಣೆಯನ್ನು ಎಲ್‌ವಿಎಮ್3 ರಾಕೆಟ್ ಮೂಲಕ ನಡೆಸಲಾಗುವುದು ಎಂದು ಇಸ್ರೋ ಅಧ್ಯಕ್ಷರು ತಿಳಿಸಿದರು.
''ಗಗನಯಾನ ಯೋಜನೆಯಲ್ಲಿ ಅತ್ಯುತ್ತಮ ಸಂಭಾವ್ಯ ಕೆಲಸವನ್ನು ನಾವು ಮಾಡಿದ್ದೇವೆ. ಈ ಯೋಜನೆಯಲ್ಲಿ ಮೊದಲು ಮೂರು ಮಾನವರಹಿತ ಉಡಾವಣೆಗಳನ್ನು ಮಾಡಲಾಗುವುದು ಮತ್ತು ಬಳಿಕ ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುವುದು. ಈಗ ನಾವು ಮೊದಲ ಮಾನವರಹಿತ ಬಾಹ್ಯಾಕಾಶ ಹಾರಟಕ್ಕೆ ಸಿದ್ಧತೆಗಳನ್ನು ಮಾಡುತ್ತಿದ್ದೇವೆ. ಈ ಯೋಜನೆಯಲ್ಲಿ ಅರೆ-ಮಾನವಾಕೃತಿಯ ರೋಬಟ್ 'ವ್ಯೋಮಿತ್ರ'ನನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುವುದು. ಸಿದ್ಧತೆಗಳು ನಿಗದಿಯಂತೆ ನಡೆಯುತ್ತಿವೆ. ಹೆಚ್ಚಿನ ಯಂತ್ರೋಪಕರಣಗಳು ಶ್ರೀಹರಿಕೋಟವನ್ನು ತಲುಪಿವೆ. ಅವುಗಳನ್ನು ಜೋಡಿಸುವ ಕೆಲಸ ಪ್ರಗತಿಯಲ್ಲಿದೆ'' ಎಂದು ನಾರಾಯಣನ್ ತಿಳಿಸಿದರು.




