ಶ್ರೀಹರಿಕೋಟ (ಆಂಧ್ರ ಪ್ರದೇಶ): ಭಾರಿ ತೂಕದ ಸಂವಹನ ಉಪಗ್ರಹ 'ಸಿಎಂಎಸ್-03' ಅನ್ನು ಭಾನುವಾರ ಉಡ್ಡಯನ ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಣಿಯಾಗಿದೆ.
ಉಪಗ್ರಹದ ತೂಕ 4,410 ಕೆ.ಜಿ ಇದ್ದು, ದೇಶದ ಬಾಹ್ಯಾಕಾಶ ಕೇಂದ್ರದಿಂದ ಇದೇ ಮೊದಲ ಬಾರಿಗೆ ಉಡ್ಡಯನ ಮಾಡಲಾಗುತ್ತಿರುವ ಭಾರಿ ತೂಕದ ಉಪಗ್ರಹ ಇದಾಗಿದೆ ಎಂದು ಇಸ್ರೊ ತಿಳಿಸಿದೆ.
ಶ್ರೀಹರಿಕೋಟದಲ್ಲಿರುವ ಉಡ್ಡಯನ ನೆಲೆಯಿಂದ ಭಾನುವಾರ (ನವೆಂಬರ್ 2) ಸಂಜೆ 5.26ಕ್ಕೆ 'ಎಲ್‌ವಿಎಂ-ಎಂ5' ರಾಕೆಟ್, ಈ ಉಪಗ್ರಹವನ್ನು ಹೊತ್ತು ನಭಕ್ಕೆ ಚಿಮ್ಮಲಿದೆ. ಉಪಗ್ರಹವನ್ನು ಭೂಹೊಂದಾಣಿಕೆ ವರ್ಗಾವಣೆ ಕಕ್ಷೆಗೆ (ಜಿಯೊಸಿಂಕ್ರೊನಸ್ ಟ್ರಾನ್ಸ್‌ಫರ್ ಆರ್ಬಿಟ್-ಜಿಟಿಒ) ಸೇರಿಸಲಾಗುತ್ತದೆ ಎಂದು ತಿಳಿಸಿದೆ.
'ಲಾಂಚ್ ವೆಹಿಕಲ್ ಮಾರ್ಕ್-3 (ಎಲ್‌ವಿಎಂ-03) ಎತ್ತರ 43.5 ಮೀಟರ್ ಇದ್ದು, 4 ಸಾವಿರ ಕೆ.ಜಿಯಷ್ಟು ಭಾರದ ಸಾಧನಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಈ ರಾಕೆಟ್ ಅನ್ನು 'ಬಾಹುಬಲಿ' ಎಂದೂ ಕರೆಯಲಾಗುತ್ತದೆ.
ಬಹುಬ್ಯಾಂಡ್ ಸಂವಹನ ಈ ಉಪಗ್ರಹದಿಂದ (ಸಿಎಂಎಸ್-03) ಸಾಧ್ಯವಾಗಲಿದೆ. ಸಾಗರಯಾನ ಕೈಗೊಳ್ಳುವವರಿಗೆ ಹಾಗೂ ಭೂಮೇಲ್ಮೈನಲ್ಲಿ ನಡೆಯುವ ಚಟುವಟಿಕೆಗಳಿಗೆ ಅಗತ್ಯವಿರುವ ಸಂವಹನ ಸೇವೆಯನ್ನು ಈ ಉಪಗ್ರಹ ಬಳಸಿ ನೀಡಲಾಗುತ್ತದೆ.
ಅಧಿಕ ಭಾರದ ಉಪಗ್ರಹಗಳನ್ನು ಹೊತ್ತು ಕಕ್ಷೆಯತ್ತ ಹಾರುವ ಸಾಮರ್ಥ್ಯದ ರಾಕೆಟ್‌ಗಳು ಇಸ್ರೊ ಬಳಿ ಇರಲಿಲ್ಲ. ಹೀಗಾಗಿ, ಜಿಸ್ಯಾಟ್-11 (5,854 ಕೆ.ಜಿ) ಉಪಗ್ರಹವನ್ನು 2018ರ ಡಿಸೆಂಬರ್ 5ರಂದು ಫ್ರೆಂಚ್ ಗಯಾನದಿಂದ ಉಡ್ಡಯನ ಮಾಡಲಾಗಿತ್ತು.




