ಬೆತಿಯಾ: 'ಸೈನಿಕರ ಜಾತಿ, ಧರ್ಮ ತಿಳಿಯಲು ಮುಂದಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ನಾಚಿಕೆಯಾಗಬೇಕು' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.
ಪಕ್ಷದ ಪರ ಗುರುವಾರ ಬಿಹಾರದ ಮಧುಬನಿ, ಪಶ್ಚಿಮ ಚಂಪಾರಣ್, ಮೋತಿಹಾರಿ ಜಿಲ್ಲೆಗಳಲ್ಲಿ ಸಾಲು ಸಾಲು ರ‍್ಯಾಲಿಗಳಲ್ಲಿ ಭಾಗವಹಿಸಿ ಮಾತನಾಡಿದ ಅವರು, 'ರಾಹುಲ್ ಗಾಂಧಿ ಅವರು ಸೈನಿಕರ ಜಾತಿ ಹಾಗೂ ಧರ್ಮವನ್ನು ಅರಿಯಲು ಬಯಸುತ್ತಿದ್ದಾರೆ.
ನಾವು ಯೋಧರನ್ನು ಜಾತಿ, ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುತ್ತಿಲ್ಲ' ಎಂದು ಹೇಳಿದ್ದಾರೆ.
'ಬಿಹಾರದಲ್ಲಿ ಆರ್‌ಜೆಡಿ ಪಕ್ಷವು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಹತ್ಯಾಕಾಂಡ, ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿತ್ತು. ಎನ್‌ಡಿಎ ಮೈತ್ರಿಕೂಟವು ಅದಕ್ಕೆ ಅವಕಾಶ ನೀಡಿಲ್ಲ. ನಿತೀಶ್ ಕುಮಾರ್- ನರೇಂದ್ರಮೋದಿ ಅವರ ನಾಯಕತ್ವವು ರಾಜ್ಯದಲ್ಲಿ 'ಜಂಗಲ್ ರಾಜ್' ಕೊನೆಯಾಗಿದೆ. ಲಾಲೂ ಪ್ರಸಾದ್-ರಾಹುಲ್ ಗಾಂಧಿ ಅವರು ಒಳನುಸುಳುಕೋರರಿಗೆ ದಾರಿ ಮಾಡಿಕೊಡುತ್ತಿದ್ದಾರೆ' ಎಂದು ಶಾ ಆರೋಪಿಸಿದ್ದಾರೆ.
ಹಲವು ಘೋಷಣೆ: 'ರಾಜ್ಯದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದರೆ, ಚಂಪಾರಣ್ ಜಿಲ್ಲೆಯಲ್ಲಿ ಹೊಸ ವಿಮಾನ ನಿಲ್ದಾಣ ಸ್ಥಾಪನೆ, ಮುಚ್ಚಿರುವ ಸಕ್ಕರೆ ಕಾರ್ಖಾನೆಗಳನ್ನು ಸಹಕಾರಿ ಯೋಜನೆಯಡಿಯಲ್ಲಿ ಪುನರುಜ್ಜೀವನ, ಮೋತಿಹಾರಿ ಜಿಲ್ಲೆಯಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ ಹಾಗೂ ಸೋಮೇಶ್ವರ ನಾಥ ದೇವಾಲಯವನ್ನು ₹100 ಕೋಟಿ ಮೊತ್ತದಲ್ಲಿ ಜೀರ್ಣೋದ್ಧಾರ ಮಾಡಲಾಗುವುದು' ಎಂದು ಶಾ ಈ ವೇಳೆ ಭರವಸೆ ನೀಡಿದ್ದಾರೆ.




