,ಚೆನ್ನೈ: ತಮಿಳುನಾಡು ಮೂಲದ ರಾಜಕೀಯ ಪಕ್ಷ ವಿಡುದಲೈ ಚಿರುತೈಗಳ್ ಕಚ್ಚಿ (ವಿಸಿಕೆ) ತನ್ನ ನೆಲೆಯನ್ನು ಕೇರಳದಲ್ಲೂ ವಿಸ್ತರಿಸಿಕೊಳ್ಳಲು ಮುಂದಾಗಿರುವ ಬೆನ್ನಿಗೇ, ತಮಿಳುನಾಡು ಆಡಳಿತಾರೂಢ ಡಿಎಂಕೆ ಪಕ್ಷ ಕೂಡಾ ಕೇರಳದ ಇಡುಕ್ಕಿಯಲ್ಲಿ ತನ್ನ ರಾಜಕೀಯ ನೆಲೆ ವಿಸ್ತರಿಸಿಕೊಳ್ಳುುವ ಚಿಂತನೆ ನಡೆಸುತ್ತಿದೆ.
ಇದರ ಭಾಗವಾಗಿ, ಇಡುಕ್ಕಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಯೋಜಿಸಿರುವ ಡಿಎಂಕೆ, ಈ ಚುನಾವಣೆಗಳಲ್ಲಿ ತಾನು ಏಕಾಂಗಿಯಾಗಿ ಸ್ಪರ್ಧಿಸುವ ಸುಳಿವು ನೀಡಿದೆ.
"ಇಡುಕ್ಕಿ ಜಿಲ್ಲೆಯ ಮುನ್ನಾರ್ ಮತ್ತು ಉಪ್ಪುತ್ತರದಲ್ಲಿ ಈಗಾಗಲೇ ಪಕ್ಷದ ಕಚೇರಿಗಳನ್ನು ತೆರೆಯಲಾಗಿದೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತಮಿಳರ ಬಾಹುಳ್ಯವಿರುವ ತೋಟಗಳ ಪ್ರದೇಶದಲ್ಲಿ ಗರಿಷ್ಠ ಪ್ರಮಾಣದ ಸ್ಥಾನಗಳಲ್ಲಿ ಪಕ್ಷ ಸ್ಪರ್ಧಿಸಲಿದೆ. ನಮ್ಮ ಪಕ್ಷವು ತನ್ನ ಅಧಿಕೃತ ಚಿಹ್ನೆಯೊಂದಿಗೆ ಸ್ಪರ್ಧಿಸಲಿದೆ" ಎಂದು ಡಿಎಂಕೆ ಇಡುಕ್ಕಿ ಜಿಲ್ಲಾ ಕಾರ್ಯದರ್ಶಿ ಕೆ.ಕೆ.ಜನಾರ್ದನನ್ ತಿಳಿಸಿದ್ದಾರೆ.
ಇಡುಕ್ಕಿ ಜಿಲ್ಲೆಯ ತೋಟಗಳಿರುವ ಪ್ರದೇಶಗಳಾದ ದೇವಿಕುಲಂ, ಉಡುಬಂಚೋಲ ಹಾಗೂ ಪೀರುಮಡೆ ತಾಲ್ಲೂಕುಗಳ ಹಲವಾರು ವಾರ್ಡ್ ಗಳಲ್ಲಿ ತಮಿಳು ಮತದಾರರ ಪ್ರಾಬಲ್ಯವಿದೆ. ಈ ಕುರಿತು ಪ್ರತಿಕ್ರಿಯಿಸಿದ ಕೆ.ಕೆ.ಜನಾರ್ದನನ್, "ತಮಿಳುನಾಡು ಮೂಲದ ಪಕ್ಷಗಳು ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರಕ್ಕೆ ಬಂದರೆ ಮಾತ್ರ, ತೋಟಗಳ ಕಾರ್ಮಿಕರ ಜೀವನ ಮಟ್ಟ ಸುಧಾರಿಸಲು ಸಾಧ್ಯ" ಎಂದು ಹೇಳಿದ್ದಾರೆ.
ರಾಜಕೀಯ ಪಕ್ಷಗಳ ನಾಯಕರ ಪ್ರಕಾರ, ವಿಡುದಲೈ ಚಿರುತೈಗಳ್ ಕಚ್ಚಿ ಪಕ್ಷ ಕೂಡಾ ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ಈ ಮೂರು ತಾಲ್ಲೂಕುಗಳಲ್ಲಿರುವ ಗಮನಾರ್ಹ ಪ್ರಮಾಣದ ತಮಿಳು ಮತದಾರರ ಮೇಲೆ ಈ ಎರಡೂ ಪಕ್ಷಗಳು ಕಣ್ಣು ನೆಟ್ಟಿವೆ.




