ಕಾಸರಗೋಡು: ಅಣಂಗೂರಿನಲ್ಲಿರುವ ಖಾಸಗಿ ವ್ಯಕ್ತಿಯೊಬ್ಬರ ಜಮೀನಿನಲ್ಲಿರುವ ಮನೋರಂಜನಾ ಕೇಂದ್ರಕ್ಕೆ 'ಕಾಸರಗೋಡ್ ಉತ್ಸವ' ಹೆಸರಿನಲ್ಲಿ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲು ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಕೆ. ಇನ್ಭಾಶೇಖರ್ ಆದೇಶಿಸಿದ್ದಾರೆ. ಸುರಕ್ಷತಾ ವ್ಯವಸ್ಥೆಗಳನ್ನು ಪಾಲಿಸುವಂತೆ ಕಾಸರಗೋಡ್ ನಗರಸಭೆ ಕಾರ್ಯದರ್ಶಿ ಮತ್ತು ಪೋಲೀಸ್, ಆರೋಗ್ಯ, ಆಹಾರ ಸುರಕ್ಷತೆ, ವಿದ್ಯುತ್, ತೂಕ ಮತ್ತು ಅಳತೆ ಇಲಾಖೆ ಮತ್ತು ಮೋಟಾರು ವಾಹನ ಇಲಾಖೆ ಮುಂತಾದ ವಿವಿಧ ಇಲಾಖೆಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ.
ಕೃತಕ ಜಲಪಾತಗಳು, ಜೈಂಟ್ ವೀಲ್, ಫುಡ್ ಕೋರ್ಟ್ ಮತ್ತು ವಾಣಿಜ್ಯ ಮಳಿಗೆಗಳಂತಹ ಮನರಂಜನಾ ಕಾರ್ಯಕ್ರಮಗಳನ್ನು ಅತ್ಯಂತ ಕಿರಿದಾದ ಜಾಗದಲ್ಲಿ ಆಯೋಜಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕಿರಿದಾದ ಜಾಗದಲ್ಲಿ ಜನದಟ್ಟಣೆ ಉಂಟಾದರೆ ಅಪಾಯವಿದೆ ಎಂಬ ಗುಪ್ತಚರ ಇಲಾಖೆಯ ವರದಿಯನ್ನು ಆಧರಿಸಿ ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರು ಜಾಗರೂಕರಾಗಿರಲು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.




