ನವದೆಹಲಿ: ಕೆಲ ಹಿಂದೂ ವೈಯಕ್ತಿಕ ಕಾನೂನುಗಳು ಭೌದ್ಧ ಧರ್ಮದವರಿಗೂ ಅನ್ವಯವಾಗುತ್ತಿದ್ದು, ಅವುಗಳಿಂದ ಧಾರ್ಮಿಕ ಆಚರಣೆಯ ಸ್ವಾತಂತ್ರ್ಯ ಸೇರಿದಂತೆ ಮೂಲಭೂತ ಹಕ್ಕುಗಳಿಗೆ ಚ್ಯುತಿ ಉಂಟಾಗುತ್ತಿದೆ ಎಂದು ಭೌದ್ಧ ಧರ್ಮೀಯರ ವೈಯಕ್ತಿಕ ಕಾನೂನು ಕ್ರಿಯಾ ಸಮಿತಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.
ಈ ಕುರಿತು ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್, ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರ ಪೀಠ, ಈ ಅರ್ಜಿಯನ್ನು ಬೌದ್ಧರ ಗುಂಪಿನ ಪ್ರಾತಿನಿಧ್ಯ ಎಂದು ಪರಿಗಣಿಸಿ, ಪರಿಶೀಲಿಸುವಂತೆ ಕಾನೂನು ಆಯೋಗಕ್ಕೆ ಶುಕ್ರವಾರ ತಿಳಿಸಿದೆ.
ಅಸ್ತಿತ್ವದಲ್ಲಿರುವ ಕೆಲ ಕಾನೂನು ನಿಬಂಧನೆಗಳು ಬೌದ್ಧ ಸಮುದಾಯದವರ ಮೂಲಭೂತ ಹಕ್ಕುಗಳು ಮತ್ತು ಸಾಂಸ್ಕೃತಿಕ ಆಚರಣೆಗಳಿಗೆ ವಿರುದ್ಧವಾಗಿವೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ. ಇದು ಸಾಂವಿಧಾನಿಕ ಮತ್ತು ಶಾಸನಬದ್ಧ ಬದಲಾವಣೆಗಳನ್ನು ಕೋರಿದ್ದು, ಪರಿಶೀಲಿಸುವಂತೆ ಪೀಠ ಆಯೋಗಕ್ಕೆ ಸೂಚಿಸಿದೆ.
ಹಿಂದೂ ವಿವಾಹ ಕಾಯ್ದೆ (1955), ಹಿಂದೂ ಉತ್ತರಾಧಿಕಾರ ಕಾಯ್ದೆ (1956), ಹಿಂದೂ ಅಪ್ರಾಪ್ತವಯಸ್ಕ ಮತ್ತು ಪಾಲನಾ ಕಾಯ್ದೆ (1956) ಮತ್ತು ಹಿಂದೂ ದತ್ತು ಮತ್ತು ನಿರ್ವಹಣಾ ಕಾಯ್ದೆಗಳು (1956) ಹಿಂದೂಗಳಂತೆಯೇ ಬೌದ್ಧರನ್ನು ನಿಯಂತ್ರಿಸುತ್ತಿವೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಅಲ್ಲದೆ, ಸಂವಿಧಾನದ 25ನೇ ವಿಧಿಯ 'ಹಿಂದೂ' ವ್ಯಾಖ್ಯಾನದೊಳಗೆ ಬೌದ್ಧರು, ಜೈನರು ಮತ್ತು ಸಿಖ್ಖರನ್ನೂ ಸೇರಿಸಲಾಗಿದೆ ಎಂದು ತಿಳಿಸಲಾಗಿದೆ.
ವಿಚಾರಣೆಯ ಆರಂಭದಲ್ಲಿ ಈ ಅರ್ಜಿಯ ಸ್ವರೂಪವನ್ನು ಪ್ರಶ್ನಿಸಿದ ಸಿಜೆಐ, 'ಸಂವಿಧಾನ ಮತ್ತು ವೈಯಕ್ತಿಕ ಕಾನೂನುಗಳನ್ನು ತಿದ್ದುಪಡಿ ಮಾಡುವ ಆದೇಶವನ್ನು ನೀವು ನಿರೀಕ್ಷಿಸುತ್ತಿದ್ದೀರಾ? ಸಂವಿಧಾನದ ಮೂಲ ರಚನೆಯ ತಿದ್ದುಪಡಿಯನ್ನೂ ಬಯಸುತ್ತಿದ್ದೀರಾ? ಈ ಸಂಬಂಧ ನೀವು ಸರ್ಕಾರಿ ಪ್ರಾಧಿಕಾರವನ್ನು ಸಂಪರ್ಕಿಸಿದ್ದೀರಾ?' ಎಂದು ಕೇಳಿತು.
ಈ ಸಂಬಂಧ ಬೌದ್ಧ ಸಮುದಾಯದವರು ಹಲವು ಬಾರಿ ಮನವಿಗಳನ್ನು ಸಲ್ಲಿಸಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ಪೀಠದ ಗಮನಕ್ಕೆ ತಂದರು.
ಆಗ ಪ್ರತಿಕ್ರಿಯಿಸಿದ ಪೀಠ, 'ಕಾನೂನು ಆಯೋಗವು ದೇಶದ ಏಕೈಕ ಕಾನೂನು ತಜ್ಞ ಸಂಸ್ಥೆ. ಅದು ಸಾಮಾನ್ಯವಾಗಿ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಅಥವಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯ ನೇತೃತ್ವದಲ್ಲಿ ಇರುತ್ತದೆ. ಈ ರೀತಿಯ ಅರ್ಜಿಗಳನ್ನು ಪರಿಶೀಲಿಸಿ, ಅಗತ್ಯವಿದ್ದರೆ ಸಾಂವಿಧಾನಿಕ ತಿದ್ದುಪಡಿಗಳಿಗೆ ಶಿಫಾರಸು ಮಾಡುತ್ತದೆ' ಎಂದು ಹೇಳಿತು.




