ನವದೆಹಲಿ: ಬಲಗೈಯಲ್ಲಿ ಹಚ್ಚೆ(ಟ್ಯಾಟೂ) ಹಾಕಿಸಿಕೊಂಡಿದ್ದಕ್ಕಾಗಿ ಅಭ್ಯರ್ಥಿಗಳನ್ನು ಸಶಸ್ತ್ರ ಪಡೆಗಳಿಗೆ ಸೇರ್ಪಡೆಗೆ ಅನರ್ಹಗೊಳಿಸುವ ಮತ್ತು ಎಡಗೈಯಲ್ಲಿ ಹಚ್ಚೆ ಹಾಕಿಸಿಕೊಳ್ಳಲು ಅನುಮತಿಸುವ ನೇಮಕಾತಿ ನಿಯಮಗಳ ಹಿಂದಿನ ತಾರ್ಕಿಕತೆಯನ್ನು ದಿಲ್ಲಿ ಹೈಕೋರ್ಟ್ ಪ್ರಶ್ನಿಸಿದೆ.
ಟ್ಯಾಟೂ ಕಾರಣಕ್ಕೆ ಅನರ್ಹಗೊಂಡಿದ್ದ ಅಭ್ಯರ್ಥಿ ವಿಪಿನ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್ ಶುಕ್ಲಾ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿದೆ.
ವಿಪಿನ್ ಕುಮಾರ್ ಅವರು ಕೇಂದ್ರ ಮೀಸಲು ಪೊಲೀಸ್ ಪಡೆ(CRPF)ಯಲ್ಲಿ ಮೋಟಾರ್ ಮೆಕ್ಯಾನಿಕ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಬಲ ಮುಂಗೈಯಲ್ಲಿ ಹಚ್ಚೆ ಇದ್ದ ಕಾರಣ ಅವರನ್ನು ಅನರ್ಹ ಎಂದು ಘೋಷಿಸಲಾಗಿತ್ತು. ವಿಪಿನ್ ಕುಮಾರ್ ತನ್ನ ಅನರ್ಹತೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದರು. ಟ್ಯಾಟೂ ತೆಗೆದುಹಾಕಲು ಸಿದ್ಧರಿರುವುದಾಗಿ ಹೇಳಿದರು.
"ಮೊದಲ ನೋಟಕ್ಕೆ, ಅಭ್ಯರ್ಥಿಯ ಬಲ ಮುಂಗೈಯಲ್ಲಿ ಹಚ್ಚೆ ಇರುವ ಕಾರಣಕ್ಕೆ ನೇಮಕಾತಿಯಿಂದ ಹೇಗೆ ಅನರ್ಹಗೊಳಿಸುತ್ತದೆ ಎಂದು ನಮಗೆ ಅರ್ಥವಾಗುತ್ತಿಲ್ಲ" ಎಂದು ಪೀಠವು ಅರ್ಜಿ ವಿಚಾರಣೆಯ ವೇಳೆ ಹೇಳಿದೆ. ಈ ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 17ಕ್ಕೆ ಮುಂದೂಡಿದೆ.

