ಕಾಸರಗೋಡು: ಆನೆಕಾಲು ರೋಗಕ್ಕೆ ಸಂಯೋಜಿತ ಚಿಕಿತ್ಸಾ ವಿಧಾನ ಅಳವಡಿಸಿ ಯಶಸ್ವಿಯಾಗಿ ಇಂದು ದೇಶ ವಿದೇಶಗಳಿಂದ ರೋಗಿಗಳು ಭೇಟಿ ನಿಡಿ ಚಿಕಿತ್ಸೆ ಪಡೆದು ಗುಣಮುಖರಾಗಿ ಸಂತೃಪ್ತಿಯಿಂದ ತೆರಳುವಂತೆ ಮಾಡುತ್ತಿರುವ ಕಾಸರಗೋಡು ಉಳಿಯತ್ತಡ್ಕದಲ್ಲಿರುವ ಐ.ಎ.ಡಿ(ಇಸ್ಟಿಟ್ಯೂಟ್ ಆಫ್ ಎಪ್ಲೈಡ್ ಡರ್ಮಟೋಲಜಿ)ಯ ಅನಘ್ರ್ಯ ಆರೋಗ್ಯ ವಿಭಾಗದ ಸಾಧನೆ ಜಾಗತಿಕವಾಗಿ ಗುರುತಿಸಲ್ಪಟ್ಟಿದೆ. ಈ ಸಂಯೋಜಿತ ಚಿಕಿತ್ಸಾ ವ್ಯವಸ್ಥೆಯನ್ನು ಶೋಧಿಸಿದವರು ಇಲ್ಲಿಯ ಖ್ಯಾತ ಚರ್ಮರೋಗ ತಜ್ಞರಾದ ಡಾ.ಎಸ್.ಆರ್.ನರಹರಿ. ಐಎಡಿಯನ್ನು ವಿಶ್ವ ಆರೋಗ್ಯ ಸಂಸ್ಥೆ 'ಇದು ಜಗತ್ತಿನಲ್ಲಿ ಆನೆಕಾಲು ರೋಗ ಚಿಕಿತ್ಸೆಯಲ್ಲಿ ಮುಂಚೂಣಿಯದ್ದು' ಎಂದು ಒಪ್ಪಿಕೊಂಡಿದೆ.
ಡಾ.ಎಸ್.ಆರ್.ನರಹರಿ ಮತ್ತವರ ತಂಡ ಶೋಧಿಸಿ ಯಶಸ್ವಿಯಾಗಿ ಮುನ್ನಡೆಸುತ್ತಿರುವ ಆನೆಕಾಲಿಗಿರುವ ಸಂಯೋಜಿತ ಚಿಕಿತ್ಸಾ ವ್ಯವಸ್ಥೆಯ ಸಾಧನೆಯನ್ನು ಗುರುತಿಸಿ ಖ್ಯಾತ ಲೇಖಕಿ, ಕವಯಿತ್ರಿ, ಸಂಶೋಧಕಿ ಮತ್ತು ವಿಮರ್ಶಕಿ, ಕಾಸರಗೋಡು ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಡಾ. ಯು. ಮಹೇಶ್ವರಿ ಅವರು ಬರೆದಿರುವ ನೂತನ ಪುಸ್ತಕ "ಆನೆಕಾಲಿಗೆ ಅಂಕುಶ- ಸಂಯೋಜಿತ ಚಿಕಿತ್ಸೆಯ ಹರಿಕಾರ ಡಾ. ನರಹರಿ ಮತ್ತು ಐ. ಎ. ಡಿ" ಕೃತಿಯನ್ನು ಇತ್ತೀಚೆಗೆ ಕಾರ್ಕಳ ಕಾಂತಾವರದಲ್ಲಿ ಬಿಡುಗಡೆಗೊಳಿಸಲಾಯಿತು.
50 ರ ಹರೆಯದ ಕಾಂತಾವರ ಕನ್ನಡ ಸಂಘದ ಸುವರ್ಣ ಸಂಭ್ರಮೋತ್ಸವದ ಗೌರವಾಧ್ಯಕ್ಷ ಕೆ. ಶ್ರೀಪತಿ ಭಟ್. ಕೃತಿ ಬಿಡುಗಡೆಗೊಳಿಸಿದರು. ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಕಮಲಾಕ್ಷ ಕಾಮತ್, ಯು.ವಿಶ್ವನಾಥ ಶೆಣೈ, ಡಾ.ಬಿ.ಜನಾರ್ದನ ಭಟ್ ಬೆಳ್ಮಣ್ಣು, ಕೃತಿಯ ಲೇಖಕಿ ಡಾ.ಯು.ಮಹೇಶ್ವರಿ, ಡಾ.ಎಸ್.ಆರ್.ನರಹರಿ, ಡಾ.ಪ್ರಸನ್ನ ನರಹರಿ ಮೊದಲಾದವರು ಉಪಸ್ಥಿತರಿದ್ದರು.
ವೈದ್ಯಕೀಯ ಲೋಕದಲ್ಲಿ ಇಂತಹದೊಂದು ಸಾಧನೆ ಮಾಡಿದ ಕಾಸರಗೋಡಿಗ ಡಾ. ನರಹರಿ ಮತ್ತು ಐ. ಎ. ಡಿ.ಯನ್ನು ಓದುಗರಿಗೆ ಸರಳ ಮತ್ತು ವಿಶಿಷ್ಟವಾಗಿ ಈ ಪುಸ್ತಕದ ಮೂಲಕ ಡಾ.ಯು. ಮಹೇಶ್ವರಿ ಪರಿಚಯಿಸಿದ್ದಾರೆ.




.jpg)
.jpg)
