ಕೊಚ್ಚಿ: ಬೃಹತ್ ನೀರಿನ ಟ್ಯಾಂಕ್‌ವೊಂದು ಕುಸಿದು ಬಿದ್ದ ಘಟನೆ ಕೊಚ್ಚಿಯ ತಮ್ಮನಂ ಪ್ರದೇಶದಲ್ಲಿ ಸೋಮವಾರ ನಡೆದಿದೆ. ಟ್ಯಾಂಕ್‌ನಲ್ಲಿದ್ದ ನೀರು ಹತ್ತಿರದ ಮನೆಗಳಿಗೆ ನುಗ್ಗಿದ್ದು, ನೀರಿನ ಪ್ರವಾಹದಲ್ಲಿ ವಾಹನಗಳು ಕೊಚ್ಚಿಕೊಂಡು ಹೋಗಿವೆ.
ಕೇರಳ ಜಲ ಪ್ರಾಧಿಕಾರಕ್ಕೆ ಸೇರಿದ ಈ ಟ್ಯಾಂಕ್ ಮುಂಜಾನೆ 2 ಗಂಟೆಯ ಸುಮಾರಿಗೆ ಕುಸಿದಿದೆ.
ಈ ಟ್ಯಾಂಕ್ 1.38 ಕೋಟಿ ಲೀಟರ್ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 10 ಮನೆಗಳಿಗೆ ನೀರು ನುಗ್ಗಿದ್ದು, ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ಅವರು ಹೇಳಿದ್ದಾರೆ.
'ನೀರಿನ ರಭಸಕ್ಕೆ ಇಲ್ಲಿ ನಿಲ್ಲಿಸಿದ್ದ ವಾಹನಗಳು ಕೊಚ್ಚಿಕೊಂಡು ಹೋಗಿವೆ. ಮನೆಗಳಿಗೂ ನೀರು ನುಗ್ಗಿದ್ದು ನೆಲಮಹಡಿಯಲ್ಲಿದ್ದ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು, ಪೀಠೋಪಕರಣಗಳು ಹಾನಿಯಾಗಿವೆ. ಹತ್ತಿರದ ಆರೋಗ್ಯ ಕೇಂದ್ರಕ್ಕೂ ನೀರು ನುಗ್ಗಿದ್ದರಿಂದ ಔಷಧಗಳು ಹಾಳಾಗಿವೆ' ಎಂದು ಎರ್ನಾಕುಲಂ ಶಾಸಕ ಟಿ. ಜೆ. ವಿನೋದ್ ಹೇಳಿದ್ದಾರೆ.
'ಈ ಟ್ಯಾಂಕ್ ಅನ್ನು 50 ವರ್ಷಗಳ ಹಿಂದೆಯೇ ನಿರ್ಮಿಸಲಾಗಿದೆ. ಕೊಚ್ಚಿ ನಗರ ಮತ್ತು ತ್ರಿಪುನಿತುರ ಪ್ರದೇಶಗಳಿಗೆ ಇಲ್ಲಿಂದಲೇ ನೀರು ಸರಬರಾಜು ಮಾಡಲಾಗುತ್ತಿದೆ' ಎಂದು ಮಾಹಿತಿ ನೀಡಿದ್ದಾರೆ
'ಘಟನೆಯಲ್ಲಿ ಮೂರು ಮನೆಗಳ ಕಾಂಪೌಂಡ್ ಗೋಡೆಗಳು ಹಾನಿಗೊಳಗಾಗಿವೆ. ತಕ್ಷಣ ಪರಿಹಾರ ನೀಡಬೇಕು' ಎಂದು ನಿವಾಸಿಯೊಬ್ಬರು ಒತ್ತಾಯಿಸಿದ್ದಾರೆ.




