ಲಂಡನ್: ಬ್ರಿಟನ್‌ನ ಕೇಂಬ್ರಿಡ್ಜ್‌ಶೈರ್‌ನ ರೈಲೊಂದರಲ್ಲಿ ಇಬ್ಬರು ದುಷ್ಕರ್ಮಿಗಳು ಹಲವು ಪ್ರಯಾಣಿಕರಿಗೆ ಚಾಕುವಿನಿಂದ ಇರಿದಿದ್ದು, ನಂತರ ಶಸ್ತ್ರಸಜ್ಜಿತ ಪೊಲೀಸರು ರೈಲನ್ನು ತಡೆದು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಂಟಿಂಗ್‌ಡನ್‌ನಲ್ಲಿ ರೈಲನ್ನು ತಡೆದು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಧಿಕಾರಿಗಳು ಬ್ರಿಟಿಷ್ ಸಾರಿಗೆ ಪೊಲೀಸರೊಂದಿಗೆ (ಬಿಟಿಪಿ) ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಕೇಂಬ್ರಿಡ್ಜ್‌ಶೈರ್ ಕಾನ್‌ಸ್ಟಾಬ್ಯುಲರಿ ತಿಳಿಸಿದೆ.
'ರೈಲಿನಲ್ಲಿ ಹಲವರಿಗೆ ಇರಿತವಾಗಿದೆ ಎಂಬ ಕುರಿತು ಶನಿವಾರ ಸಂಜೆ 7:39ಕ್ಕೆ (ಸ್ಥಳೀಯ ಸಮಯ) ನಮಗೆ ಕರೆ ಬಂದಿತು' ಎಂದು ಕೇಂಬ್ರಿಡ್ಜ್‌ಶೈರ್ ಕಾನ್‌ಸ್ಟಾಬ್ಯುಲರಿ ಹೇಳಿಕೆಯಲ್ಲಿ ತಿಳಿಸಿದೆ.
'ಹಂಟಿಂಗ್‌ಡನ್‌ನಲ್ಲಿ ರೈಲನ್ನು ತಡೆದ ಸಶಸ್ತ್ರ ಪೊಲೀಸರು, ಇಬ್ಬರು ಪುರುಷರನ್ನು ಬಂಧಿಸಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ'ಎಂದು ಪೊಲೀಸರು ತಿಳಿಸಿದ್ದಾರೆ.
ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಭಯಾನಕ ಘಟನೆಯನ್ನು ಖಂಡಿಸಿದ್ದು, ಜನರು ಪೊಲೀಸರ ಸಲಹೆಯನ್ನು ಪಾಲಿಸುವಂತೆ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಒತ್ತಾಯಿಸಿದ್ದಾರೆ.
'ಗಾಯಾಳುಗಳ ನೆರವಿಗೆ ನಾವಿದ್ದೇವೆ. ಸಂತ್ರಸ್ತರಿಗೆ ಸ್ಪಂದಿಸಿದ ತುರ್ತು ಸೇವೆ ಅಧಿಕಾರಿಗಳಿಗೆ ಧನ್ಯವಾದ. ಆ ಪ್ರದೇಶ ಪ್ರತಿಯೊಬ್ಬರೂ ಪೊಲಿಸರ ಸಲಹೆ ಪಾಲಿಸಬೇಕು' ಎಂದು ಅವರು ಹೆಳಿದ್ದಾರೆ.
ಘಟನೆ ಕುರಿತಂತೆ ಗೃಹ ಕಾರ್ಯದರ್ಶಿ ಶಬಾನಾ ಮೊಹಮ್ಮದ್ ಆಘಾತ ವ್ಯಕ್ತಪಡಿಸಿದ್ದು, ವದಂತಿಗಳಿಗೆ ಕಿವಿಗೊಡದಂತೆ ಜನರಲ್ಲಿ ಮನವಿ ಮಾಡಿದ್ದಾರೆ.
ಘಟನೆ ಹಿನ್ನೆಲೆ ಪೂರ್ವ ಇಂಗ್ಲೆಂಡ್‌ನಲ್ಲಿ ಭಾರಿ ಭದ್ರತೆ ಮಾಡಲಾಗಿದ್ದು, ವೈದ್ಯಕೀಯ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ಆಯಂಬುಲೆನ್ಸ್, ಏರ್ ಆಯಂಬುಲೆನ್ಸ್ ಸಜ್ಜಾಗಿವೆ.

