HEALTH TIPS

Delhi Blast | ಕಾರು ಚಲಾಯಿಸುತ್ತಿದ್ದದ್ದು ಉಮರ್ ನಬಿ: DNA ಪರೀಕ್ಷೆಯಲ್ಲಿ ದೃಢ

ನವದೆಹಲಿ: ಕೆಂಪುಕೋಟೆ ಬಳಿ ಸೋಮವಾರ ಪ್ರಬಲವಾಗಿ ಸ್ಫೋಟಗೊಂಡ ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿ ಡಾ. ಉಮರ್‌ ನಬಿ ಎನ್ನುವುದು ದೃಢಪಟ್ಟಿದೆ. ಹುಂಡೈ ಐ20 ಕಾರಿನಲ್ಲಿ ದೊರೆತ ದೇಹದ ಭಾಗಗಳನ್ನು ಉಮರ್‌ ತಾಯಿಯ ಡಿಎನ್‌ಎ ಜತೆ ಪರೀಕ್ಷಿಸಿದ ಬಳಿಕ ಅದು ಸ್ಪಷ್ಟವಾಗಿದೆ.

ಸ್ಫೋಟದ ವೇಳೆ ಕಾರಿನಲ್ಲಿ ಉಮರ್‌ ಒಬ್ಬನೇ ಇದ್ದ ಎಂಬುದನ್ನೂ ತನಿಖಾಧಿಕಾರಿಗಳು ದೃಢಪಡಿದ್ದಾರೆ.

ಇದರ ನಡುವೆಯೇ ದೆಹಲಿ ಮತ್ತು ಸುತ್ತಮುತ್ತಲಿನ 50ಕ್ಕೂ ಹೆಚ್ಚು ಸಿ.ಸಿ.ಟಿ.ವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಜಾಲಾಡಿರುವ ತನಿಖಾ ತಂಡದವರು, ಸ್ಫೋಟಕ್ಕೂ ಮುನ್ನ ಉಮರ್‌ ಚಲನವಲನಗಳನ್ನು ಗುರುತಿಸಿದ್ದಾರೆ. ಅದರಲ್ಲಿ ಹಲವು ಆಸಕ್ತಿಕರ ಮಾಹಿತಿ ಲಭ್ಯವಾಗಿದೆ.

ಸ್ಫೋಟದ ಹಿಂದಿನ ದಿನವಾದ ಭಾನುವಾರ ರಾತ್ರಿ ಫರೀದಾಬಾದ್‌ನಿಂದ ಹೊರಟು, ಸ್ಫೋಟಕಗಳು ತುಂಬಿದ್ದ ಕಾರನ್ನು ಸೋಮವಾರ ಸಂಜೆ ಕೆಂಪುಕೋಟೆ ಬಳಿಯ ಮೆಟ್ರೊ ನಿಲ್ದಾಣದ ಸಮೀಪ ಯಾವುದೇ ಧಾವಂತವಿಲ್ಲದೆ ನಿಧಾನವಾಗಿ ಚಾಲನೆ ಮಾಡಿಕೊಂಡು ಸಾಗಿದ್ದ ದೃಶ್ಯಗಳೂ ಸೆರೆಯಾಗಿವೆ.

ಸಿ.ಸಿ.ಟಿ.ವಿ ಕ್ಯಾಮೆರಾಗಳು, ಟೋಲ್‌ ಪ್ಲಾಜಾ ದತ್ತಾಂಶ, ಜಿಪಿಎಸ್‌ ಮತ್ತು ಮೊಬೈಲ್‌ ಟವರ್‌ಗಳನ್ನು ಪರಿಶೀಲಿಸಿ ಉಮರ್‌ನ ಚಲನವಲನದ ಕಾಲಾನುಕ್ರಮಣಿಕೆಯನ್ನು ದೆಹಲಿ ಪೊಲೀಸರು ವಿವರಿಸಿದ್ದಾರೆ.

ಉಮರ್‌ನ ಕಡೆಯ ದಿನ ಹೀಗಿತ್ತು...

ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಮೂಲಕ ಹರಿಯಾಣದಿಂದ ದೆಹಲಿಗೆ ಐ20 ಕಾರಿನಲ್ಲಿ ಉಮರ್‌ ಪ್ರಯಾಣ ಬೆಳೆಸಿದ್ದಾನೆ. ಭಾನುವಾರ ರಾತ್ರಿ ಎಕ್ಸ್‌ಪ್ರೆಸ್‌ವೇಯಲ್ಲಿ ಹರಿಯಾಣದ ನೂಹ್‌ ಜಿಲ್ಲೆಯ ಫಿರೋಜ್‌ಪುರ ಜಿರ್ಕಾದ ರಸ್ತೆ ಬದಿಯ ಢಾಬಾದಲ್ಲಿ ನಿಲ್ಲಿಸಿ ಆಹಾರ ಸೇವಿಸಿದ್ದಾನೆ. ನಂತರ ಅಲ್ಲಿ ಕಾರಿನಲ್ಲಿಯೇ ಇಡೀ ರಾತ್ರಿ ಕಳೆದು, ಮರುದಿನ ಬೆಳಿಗ್ಗೆ ರಾಷ್ಟ್ರ ರಾಜಧಾನಿಯತ್ತ ಸಾಗಿದ್ದಾನೆ.

ಗುರುತು ಮರೆಮಾಚಲು ಮಾಸ್ಕ್ ಧರಿಸಿದ್ದ ಆತನ ಕಾರಿನ ಹಿಂದಿನ ಸೀಟಿನಲ್ಲಿ ದೊಡ್ಡ ಚೀಲ ಇದ್ದುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಹುಶಃ ಅದು ಸ್ಫೋಟಕವಿದ್ದಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.

ಸೋಮವಾರ ಬೆಳಿಗ್ಗೆ ಆತ ದೆಹಲಿಯತ್ತ ನಿಧಾನವಾಗಿ ಕಾರು ಚಾಲನೆ ಮಾಡಿಕೊಂಡು ಹೋಗುತ್ತಿದ್ದ ದೃಶ್ಯ ಎಕ್ಸ್‌ಪ್ರೆಸ್‌ವೇಯ ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಈ ರಸ್ತೆಯಲ್ಲಿ ಆತ ಎರಡು ಬಾರಿ ಕಾರು ನಿಲ್ಲಿಸಿದ್ದ. ಒಮ್ಮೆ ನಿಲ್ಲಿಸಿದ್ದಾಗ ಚಹಾ ಕುಡಿದಿದ್ದರೆ, ಇನ್ನೊಮ್ಮೆ ಮೊಬೈಲ್‌ ಫೋನ್‌ ಪರಿಶೀಲಿಸಿದ್ದ.

ಬದರ್‌ಪುರ ಗಡಿ ಮೂಲಕ ಬೆಳಿಗ್ಗೆ 8.13 ಗಂಟೆಗೆ ದೆಹಲಿ ಪ್ರವೇಶಿಸಿದ ಆತ, ಅಲ್ಲಿಂದ ಮಧ್ಯಾಹ್ನ 3 ಗಂಟೆಯವರೆಗೆ ರಾಜಧಾನಿಯ ಅನೇಕ ಕಡೆಗಳಲ್ಲಿ ಸುತ್ತಾಡಿದ್ದಾನೆ. ಮಧ್ಯಾಹ್ನ 3.19ಕ್ಕೆ ಕೆಂಪುಕೋಟೆ ಬಳಿಯ ಮಸೀದಿಯ ಹತ್ತಿರ ವಾಹನ ನಿಲುಗಡೆ ಮಾಡಿದ್ದು ಸೆರೆಯಾಗಿದೆ.

ದೆಹಲಿಯಲ್ಲಿ ಎಲ್ಲೆಲ್ಲಿ ಸುತ್ತಾಟ?

ಬದರ್‌ಪುರ ಟೋಲ್‌ ಪ್ಲಾಜಾ ದಾಟಿ ದೆಹಲಿ ಪ್ರವೇಶಿಸಿದ ಉಮರ್‌, ಓಖ್ಲಾ, ಕೈಗಾರಿಕಾ ಪ್ರದೇಶ ಸೇರಿದಂತೆ ಆಗ್ನೇಯ ದೆಹಲಿಯ ವಿವಿಧೆಡೆ ಕಾರು ಓಡಿಸಿದ್ದಾನೆ. ಕನ್ನಾಟ್‌ ಪ್ರದೇಶ ದಾಟಿ ಪೂರ್ವ ದೆಹಲಿಗೆ ಬಂದು, ನಂತರ ಮಧ್ಯ ದೆಹಲಿಯ ರಿಂಗ್‌ ರಸ್ತೆ ಬಳಿ ಕಾಣಿಸಿಕೊಂಡಿದ್ದಾನೆ. ಉದ್ದೇಶಪೂರ್ವಕವಾಗಿಯೇ ಆತ ಪ್ರಮುಖ ರಸ್ತೆಗಳನ್ನು ತಪ್ಪಿಸಿ, ಜನದಟ್ಟಣೆ ಪ್ರದೇಶಗಳ ಮಾರ್ಗವನ್ನು ಆಯ್ಕೆ ಮಾಡಿಕೊಂಡಿರುವಂತೆ ಕಾಣುತ್ತದೆ ಎಂದು ಪೊಲೀಸರು ವಿವರಿಸಿದ್ದಾರೆ.

ದೆಹಲಿಯ ಅಶೋಕ್‌ ವಿಹಾರದ ಬಳಿ ಮಧ್ಯಾಹ್ನ ರಸ್ತೆ ಬದಿಯ ಉಪಾಹಾರ ಗೃಹದ ಬಳಿ ನಿಂತು ಆಹಾರ ಸೇವಿಸಿ, ಕೆಲ ಕಾಲ ಕಳೆದಿದ್ದಾನೆ. ಈ ವೇಳೆ ಆತ ಶಾಂತವಾಗಿಯೇ ಇದ್ದುದು ಕಂಡುಬಂದಿದೆ.

ನಂತರ ರಾಮಲೀಲಾ ಮೈದಾನದ ಬಳಿಯ ಅಸಫ್‌ ಅಲಿ ರಸ್ತೆ ಹತ್ತಿರದ ಮಸೀದಿಗೆ ಭೇಟಿ ನೀಡಿದ್ದಾನೆ. ಅಲ್ಲಿ ಪ್ರಾರ್ಥನೆ ಸಲ್ಲಿಸಿ, ಪಾರ್ಕಿಂಗ್‌ ಪ್ರದೇಶದಲ್ಲಿ ಸುಮಾರು ಮೂರು ಗಂಟೆಗಳಿಗೂ ಹೆಚ್ಚು ಕಾಲ ಕಳೆದಿದ್ದಾನೆ. ಈ ಅವಧಿಯಲ್ಲಿ ಆತ ಮೊಬೈಲ್‌ ವೀಕ್ಷಣೆಯಲ್ಲಿ ತೊಡಗಿದ್ದ.

'ಕೆಂಪುಕೋಟೆ ಹತ್ತಿರದ ಸುನೆಹರಿ ಮಸೀದಿ ಪಾರ್ಕಿಂಗ್‌ ಬಳಿ ಮಧ್ಯಾಹ್ನ 3.19ಕ್ಕೆ ಪ್ರವೇಶಿಸಿ, ಅಲ್ಲಿಯೇ ಸುಮಾರು ಮೂರು ಗಂಟೆ ಕಾರು ನಿಲ್ಲಿಸಿದ್ದಾನೆ. ಸಂಜೆ 6.22ರ ವೇಳೆಗೆ ಪಾರ್ಕಿಂಗ್‌ ಪ್ರದೇಶದಿಂದ ಕಾರು ಚಲಾಯಿಸಿಕೊಂಡು ಕೆಂಪುಕೋಟೆ ಮಟ್ರೊ ನಿಲ್ದಾಣದತ್ತ ಸಾಗಿದ್ದಾನೆ. 30 ನಿಮಿಷಗಳಲ್ಲಿ ಅಂದರೆ ಸಂಜೆ 6.52ಕ್ಕೆ ಕಾರು ಪ್ರಬಲವಾಗಿ ಸ್ಫೋಟಗೊಂಡಿದೆ. ಈ ಎಲ್ಲ ದೃಶ್ಯಗಳು ಸೆರೆಯಾಗಿವೆ' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸ್ಫೋಟಕಗಳ ಖರೀದಿಗೆ ₹25-₹30 ಲಕ್ಷ ಸಂಗ್ರಹ

ಶಂಕಿತ ಉಗ್ರರು ಸ್ಫೋಟಕಗಳನ್ನು ಖರೀದಿಸಲು ₹25 ಲಕ್ಷದಿಂದ ₹30 ಲಕ್ಷವನ್ನು ಸಂಗ್ರಹಿಸಿದ್ದರು ಎಂಬ ಮಾಹಿತಿ ತನಿಖೆಯಿಂದ ಗೊತ್ತಾಗಿದೆ. ವೈದ್ಯರಾದ ಉಮರ್‌ ಮುಜಮ್ಮಿಲ್‌ ಗನಿ ಆದಿಲ್‌ ಅಹ್ಮದ್‌ ರಾಠರ್‌ ಶಾಹೀನ್ ಸಯೀದ್‌ ಸ್ಫೋಟಕಗಳನ್ನು ಖರೀದಿಸಲು ಇಷ್ಟು ಹಣ ಹೊಂದಿಸಿದ್ದರು. ಗುರುಗ್ರಾಮ ನೂಹ್‌ ಮತ್ತು ಇತರ ಪಟ್ಟಣಗಳಿಂದ ₹3 ಲಕ್ಷ ಪಾವತಿಸಿ ಸುಮಾರು 26 ಕ್ವಿಂಟಲ್‌ ಎನ್‌ಪಿಕೆ ಗೊಬ್ಬರ ಖರೀದಿಸಿದ್ದರು. ಅದನ್ನು ಕಚ್ಚಾ ಬಾಂಬ್‌ಗಳ (ಐಇಡಿ) ತಯಾರಿಕೆಗೆ ಬಳಸುತ್ತಿದ್ದರು ಎಂಬುದು ಗೊತ್ತಾಗಿದೆ ಎಂದು ತನಿಖಾಧಿಕಾರಿಗಳು ಗುರುವಾರ ಹೇಳಿದ್ದಾರೆ.

ಮೂರು ಕಾರುಗಳು ವಶಕ್ಕೆ: ಆರೋಪಿ ಡಾ. ಶಾಹೀನ್‌ ಒಂದೂವರೆ ತಿಂಗಳ ಹಿಂದೆ ಖರೀದಿಸಿದ್ದ ಕಾರನ್ನು (ಮಾರುತಿ ಬ್ರೆಜಾ) ಪೊಲೀಸರು ಅಲ್‌-ಫಲಾಹ್‌ ವಿಶ್ವವಿದ್ಯಾಲಯದ ಆವರಣದಿಂದ ವಶಕ್ಕೆ ಪಡೆದಿದ್ದಾರೆ. ಅದಕ್ಕೂ ಮುನ್ನ ಶಾಹೀನ್‌ಗೆ ಸೇರಿದ ಮಾರುತಿ ಡಿಝೈರ್‌ ಕಾರನ್ನೂ ವಶಪಡಿಸಿಕೊಂಡು ತಪಾಸಣೆ ನಡೆಸಿದ್ದಾರೆ. ಉಮರ್‌ಗೆ ಸೇರಿದ್ದ ಮತ್ತೊಂದು ಕಾರಾದ 'ಎಕೊಸ್ಪೋರ್ಟ್ಸ್‌' ಅನ್ನು ಬುಧವಾರವೇ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಈ ಕಾರುಗಳನ್ನು ಸ್ಥಳ ಪರಿಶೀಲನೆಗೆ ಸ್ಫೋಟಕ್ಕೆ ಅಥವಾ ಭದ್ರತಾ ಪಡೆಗಳಿಂದ ತಪ್ಪಿಸಿಕೊಳ್ಳುವುದಕ್ಕೆ ಬಳಸುವ ಉದ್ದೇಶವನ್ನು ಶಂಕಿತರು ಹೊಂದಿದ್ದರು ಎನ್ನಲಾಗಿದೆ.

ಮೃತರ ಸಂಖ್ಯೆ 13ಕ್ಕೆ ಏರಿಕೆ: ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಛಿದ್ರಗೊಂಡಿರುವ ತಲೆ ಬುರುಡೆ ಮತ್ತು ಕೈಯ ಭಾಗಗಳನ್ನು ಸ್ಫೋಟಗೊಂಡ ಪ್ರದೇಶದ ಸಮೀಪದ ಕಟ್ಟಡವೊಂದರ ಚಾವಣಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೆಂಪು ಕೋಟೆಯ ಬಳಿ ಸೋಮವಾರ ಸಂಭವಿಸಿದ್ದ ಸ್ಫೋಟದಲ್ಲಿ 12 ಮಂದಿ ಮೃತಪಟ್ಟಿದ್ದರು. ಉಮರ್ ನಬಿ ಫರೀದಾಬಾದ್‌ನಲ್ಲಿ ಪತ್ತೆಯಾದ ಭಯೋತ್ಪಾದಕರ ಜಾಲದೊಂದಿಗೆ ಸಂಪರ್ಕ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಈ ಆರೋಪವನ್ನು ಆತನ ಕುಟುಂಬ ಸದಸ್ಯರು ತಳ್ಳಿ ಹಾಕಿದ್ದಾರೆ.

ಫರೀದಾಬಾದ್‌ನಲ್ಲಿ 360 ಕೆ.ಜಿ ಅಮೋನಿಯಂ ನೈಟ್ರೇಟ್ ಸೇರಿದಂತೆ 2,900 ಕೆ.ಜಿ ಸ್ಫೋಟಕಗಳನ್ನು ಸೋಮವಾರ ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣಕ್ಕೂ ಸ್ಫೋಟ ಘಟನೆಗೂ ಸಂಬಂಧವಿರುವುದು ಪ್ರಾಥಮಿಕ ತನಿಖೆಗಳಿಂದ ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.

ಉಮರ್ ನಬಿ ಬದರ್‌ಪುರ ಮೂಲಕ ದೆಹಲಿ ಪ್ರವೇಶಿಸಿ, ಮಧ್ಯಾಹ್ನ 3.20ರ ಸುಮಾರಿಗೆ ಕೆಂಪು ಕೋಟೆ ಬಳಿಯ ವಾಹನ ನಿಲುಗಡೆ ಸ್ಥಳ ತಲುಪಿದ್ದ. ಆತ ಸಂಜೆ 6.30 ರವರೆಗೆ ಕಾರಿನೊಳಗೆ ಇದ್ದ ಎಂದು ಮೂಲಗಳು ತಿಳಿಸಿವೆ. ಸೋಮವಾರ ಸಂಜೆ 6.52ಕ್ಕೆ ನಿಧಾನವಾಗಿ ಚಲಿಸಿದ ವಾಹನದಲ್ಲಿ ಸ್ಫೋಟ ಸಂಭವಿಸಿದೆ ಎಂದು ದೆಹಲಿ ಪೊಲೀಸ್ ಆಯುಕ್ತ ಸತೀಶ್ ಗೋಲ್ಚಾ ಹೇಳಿದ್ದಾರೆ.

ಸ್ಫೋಟಕ್ಕೆ ಅಮೋನಿಯಂ ನೈಟ್ರೇಟ್ ಮತ್ತು ಡಿಟೋನೇಟರ್‌ಗಳನ್ನು ಬಳಸಿರಬಹುದು ಎಂದು ಪ್ರಾಥಮಿಕ ತನಿಖೆಗಳಿಂದ ಗೊತ್ತಾಗಿದೆ.

ಸ್ಫೋಟಕ್ಕೂ ಮುನ್ನ ಮಸೀದಿಗೆ ಭೇಟಿ

ಕಾರು ಸ್ಫೋಟಕ್ಕೂ ಮುನ್ನ ಡಾ. ಉಮರ್ ನಬಿ ಕೆಂಪು ಕೋಟೆ ಬಳಿಯ ತುರ್ಕಮನ್ ಗೇಟ್ ಮಸೀದಿಗೆ ಭೇಟಿ ನೀಡಿ ಅಲ್ಲಿಂದ ನಿರ್ಗಮಿಸುತ್ತಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಅದರ ವಿಡಿಯೊವನ್ನು ಸುದ್ದಿ ಸಂಸ್ಥೆ 'ಎಎನ್‌ಐ' ಹಂಚಿಕೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries