HEALTH TIPS

Delhi Blast: ಅಲ್ ಫಲಾಹ್ ವಿಶ್ವವಿದ್ಯಾಲಯದ ಇಬ್ಬರು ವೈದ್ಯರು ಸೇರಿ ಮೂವರ ಬಂಧನ

ನವದೆಹಲಿ: ಕೆಂಪು ಕೋಟೆ ಬಳಿ ಸ್ಫೋಟಗೊಂಡ ಕಾರಿನ ಚಾಲಕ ಡಾ. ಉಮರ್ ನಬಿಗೆ ಪರಿಚಿತರಾಗಿದ್ದ ಹರಿಯಾಣದ ಅಲ್ ಫಲಾಹ್ ವಿಶ್ವವಿದ್ಯಾಲಯದ ಇಬ್ಬರು ವೈದ್ಯರು ಸೇರಿದಂತೆ ಮೂವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಂಡದ ಸಹಾಯದಿಂದ ದೆಹಲಿ ಪೊಲೀಸ್ ವಿಶೇಷ ಘಟಕ ಹರಿಯಾಣದ ಧೌಜ್, ನುಹ್ ಮತ್ತು ಪಕ್ಕದ ಪ್ರದೇಶಗಳಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ್ದು, ಮೂವರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಅಲ್ ಫಲಾಹ್ ವಿಶ್ವವಿದ್ಯಾಲಯದ ವೈದ್ಯರಾದ ಮೊಹಮ್ಮದ್ ಮತ್ತು ಮುಸ್ತಕಿಮ್ ಬಂಧಿತರು.

'ವೈಟ್ ಕಾಲರ್' ಭಯೋತ್ಪಾದನೆ ಜಾಲ ಪ್ರಕರಣದ ತನಿಖೆಯ ಭಾಗವಾಗಿ ಬಂಧಿಸಲ್ಪಟ್ಟಿರುವ ಡಾ. ಮುಜಮ್ಮಿಲ್ ಗನೈ ಅವರೊಂದಿಗೆ ಈ ಇಬ್ಬರೂ ಸಂಪರ್ಕದಲ್ಲಿದ್ದರು ಎಂದು ಹೇಳಲಾಗಿದೆ. ಆತ (ಮುಜಮ್ಮಿಲ್) ಡಾ. ಉಮರ್ ನಬಿಯವರ ಆಪ್ತ ಸ್ನೇಹಿತ ಎಂದು ಮೂಲಗಳು ತಿಳಿಸಿವೆ.

ಬಂಧಿತ ವೈದ್ಯರಲ್ಲಿ ಒಬ್ಬರು ಸ್ಫೋಟ ಸಂಭವಿಸಿದ ದಿನ ದೆಹಲಿಯಲ್ಲಿದ್ದರು ಎಂದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿದೆ. ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್) ಸಂದರ್ಶನಕ್ಕಾಗಿ ರಾಷ್ಟ್ರ ರಾಜಧಾನಿಗೆ ಬಂದಿದ್ದರು ಎಂದು ಅವರು ಹೇಳಿದ್ದಾರೆ.

ಡಾ.ಗನೈ ಅವರೊಂದಿಗೆ ನಂಟು ಹೊಂದಿದ್ದಾರೆಯೇ ಎಂಬುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಸ್ಫೋಟ ಪ್ರಕರಣದಲ್ಲಿ ‌ಅವರ ಪಾತ್ರವಿದೆಯೇ ಎಂದು ಖಚಿತಪಡಿಸಿಕೊಳ್ಳಲು ಮೊಹಮ್ಮದ್ ಮತ್ತು ಮುಸ್ತಕಿಮ್ ಅವರನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ನುಹ್‌ನಲ್ಲಿ ನಡೆದ ಮತ್ತೊಂದು ಕಾರ್ಯಾಚರಣೆಯಲ್ಲಿ, ಪರವಾನಗಿ ಇಲ್ಲದೆ ರಸಗೊಬ್ಬರಗಳನ್ನು ಮಾರಾಟ ಮಾಡಿದ್ದ ಆರೋಪದಡಿ ದಿನೇಶ್ ಅಲಿಯಾಸ್ 'ಡಬ್ಬು' ಎಂದು ಗುರುತಿಸಲಾದ ಮತ್ತೊಬ್ಬ ವ್ಯಕ್ತಿಯನ್ನು ತನಿಖಾ ಸಂಸ್ಥೆಗಳು ಬಂಧಿಸಿವೆ.

ಶಂಕಿತ ಉಗ್ರರು ಸ್ಫೋಟಕಗಳನ್ನು ಖರೀದಿಸಲು ₹25 ಲಕ್ಷದಿಂದ ₹30 ಲಕ್ಷವನ್ನು ಸಂಗ್ರಹಿಸಿದ್ದರು ಎಂಬ ಮಾಹಿತಿ ತನಿಖೆಯಿಂದ ಗೊತ್ತಾಗಿದೆ.

ವೈದ್ಯರಾದ ಉಮರ್‌, ಮುಜಮ್ಮಿಲ್‌ ಗನಿ, ಆದಿಲ್‌ ಅಹ್ಮದ್‌ ರಾಠರ್‌, ಶಾಹೀನ್ ಸಯೀದ್‌ ಸ್ಫೋಟಕಗಳನ್ನು ಖರೀದಿಸಲು ಇಷ್ಟು ಹಣ ಹೊಂದಿಸಿದ್ದರು. ಗುರುಗ್ರಾಮ, ನೂಹ್‌ ಮತ್ತು ಇತರ ಪಟ್ಟಣಗಳಿಂದ ₹3 ಲಕ್ಷ ಪಾವತಿಸಿ ಸುಮಾರು 26 ಕ್ವಿಂಟಲ್‌ ಎನ್‌ಪಿಕೆ ಗೊಬ್ಬರ ಖರೀದಿಸಿದ್ದರು. ಅದನ್ನು ಕಚ್ಚಾ ಬಾಂಬ್‌ಗಳ (ಐಇಡಿ) ತಯಾರಿಕೆಗೆ ಬಳಸುತ್ತಿದ್ದರು ಎಂಬುದು ಗೊತ್ತಾಗಿದೆ ಎಂದು ತನಿಖಾಧಿಕಾರಿಗಳು ಗುರುವಾರ ಹೇಳಿದ್ದಾರೆ.

ದಿನೇಶ್, ರಸಗೊಬ್ಬರವನ್ನು ಆರೋಪಿಗಳಿಗೆ ಮಾರಾಟ ಮಾಡಿದ್ದಾನೆಯೇ ? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries