ದೃಷ್ಟಿ ದೋಷವುಳ್ಳ ಅಭ್ಯರ್ಥಿಗಳಿಗೆ ಸಮರ್ಪಕ ಅವಕಾಶಗಳ ಕೊರತೆ ಎದುರಾಗಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿಕ್ರಮ ನಾಥ್ ಹಾಗೂ ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸುತ್ತಿದೆ.
ಈ ಅರ್ಜಿಗೆ ಸಂಬಂಧಿಸಿದಂತೆ ಆಯೋಗವು ಶುಕ್ರವಾರ ಅಫಿಡವಿಟ್ ಸಲ್ಲಿಸಿದೆ. ಅದರಲ್ಲಿ 'ಸ್ಕ್ರೀನ್ ರೀಡರ್ ಸಾಫ್ಟ್‌ವೇರ್ ಸಹಾಯದೊಂದಿಗೆ ಪರೀಕ್ಷೆ ಬರೆಯುವ ಆಯ್ಕೆ ಬಯಸಿದ ದೃಷ್ಟಿ ದೋಷವುಳ್ಳ ಅಭ್ಯರ್ಥಿಗಳಿಗೆ ಈ ಸೌಲಭ್ಯವನ್ನು ಒದಗಿಸಿಕೊಡಬೇಕೆಂಬ ನಿಟ್ಟಿನಲ್ಲಿ ಆಯೋಗವು ಈಗಾಗಲೇ ಪರಿಶೀಲನಾ ಸಭೆ ನಡೆಸಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸರಿಯಾದ ಮೂಲಸೌಕರ್ಯ/ಸಾಫ್ಟವೇರ್‌ನ ಲಭ್ಯತೆಯನ್ನು ಖಚಿತಪಡಿಸಿಕೊಂಡು, ಪರೀಕ್ಷೆಗಳನ್ನು ನಡೆಸುವ ಕಾರ್ಯಸಾಧ್ಯತೆಯನ್ನು ಪರಿಶೀಲಿಸಿದ ತಕ್ಷಣವೇ ಸೌಲಭ್ಯ ಒದಗಿಸಲಾಗುವುದು' ಎಂದೂ ತಿಳಿಸಿದೆ.
ಪ್ರತೀ ಪರೀಕ್ಷಾ ಕೇಂದ್ರದಲ್ಲಿರುವ ದೃಷ್ಟಿ ದೋಷವುಳ್ಳವರ ಸಂಖ್ಯೆ, ಸ್ಕ್ರೀನ್ ರೀಡರ್ ಸಾಫ್ಟ್‌ವೇರ್ ಸೌಲಭ್ಯ ಹೊಂದಿರುವ ಕಂಪ್ಯೂಟರ್-ಲ್ಯಾಪ್‌ಟಾಪ್‌ಗಳ ಲಭ್ಯತೆ, ಹೊಸದಾಗಿ ಖರೀದಿಸಬೇಕಾದ ಸಾಫ್ಟ್‌ವೇರ್, ಡಿಜಿಟಲ್ ಪ್ರಶ್ನೆ ಪತ್ರಿಕೆಗಳ ತಯಾರಿ ಸೇರಿದಂತೆ ವಿವಿಧ ವಿಚಾರಗಳನ್ನೂ ದೃಷ್ಟಿ ದೋಷವುಳ್ಳ ವ್ಯಕ್ತಿಗಳ ರಾಷ್ಟ್ರೀಯ ಸಬಲೀಕರಣ ಸಂಸ್ಥೆ (ಎನ್‌ಐಇಪಿವಿಡಿ) ಜತೆಗೆ ಚರ್ಚಿಸಲಾಗಿದೆ ಎಂದೂ ಆಯೋಗ ಮಾಹಿತಿ ನೀಡಿದೆ.




