ನವದೆಹಲಿ: ದೇಶದಲ್ಲಿ ಬಾಲ್ಯ ವಿವಾಹ ತಡೆಗಟ್ಟುವ ಉದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ನಾಳೆಯಿಂದ 100 ದಿನಗಳ ರಾಷ್ಟ್ರೀಯ ಜಾಗೃತಿ ಅಭಿಯಾನವನ್ನು ಆರಂಭಿಸಲು ಸಿದ್ಧತೆ ಮಾಡಿಕೊಂಡಿದೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣಾ ದೇವಿ ಹಾಗೂ ರಾಜ್ಯ ಸಚಿವೆ ಸಾವಿತ್ರಿ ಠಾಕೂರ್ ಅವರ ನೇತೃತ್ವದಲ್ಲಿ ದೆಹಲಿಯ ವಿಜ್ಞಾನ ಭವನದಲ್ಲಿ ಈ ಅಭಿಯಾನಕ್ಕೆ ಅಧಿಕೃತ ಚಾಲನೆ ದೊರಕಲಿದೆ.
ಮಕ್ಕಳ ಹಕ್ಕು ರಕ್ಷಣೆ ಮತ್ತು ಬಾಲ್ಯ ವಿವಾಹ ನಿರ್ಮೂಲನೆಗೆ ಬಲ ತುಂಬುವ ಈ ಅಭಿಯಾನವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪಂಚಾಯತಿ ರಾಜ್, ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಚಿವಾಲಯಗಳೊಂದಿಗೆ ನಿಕಟ ಸಮನ್ವಯದ ಮೂಲಕ ಜಾರಿಗೆ ತರಲಾಗುತ್ತದೆ. ಈ ಅಭಿಯಾನವನ್ನು ಮೂರು ಹಂತಗಳಲ್ಲಿ ಕೈಗೊಳ್ಳಲಾಗುತ್ತಿದ್ದು, ನಾಗರಿಕರು, ಸೇವಾ ಸಂಸ್ಥೆಗಳು, ಸಮುದಾಯ ಮುಖಂಡರು ಎಲ್ಲರೂ ಈ ಆಂದೋಲನದಲ್ಲಿ ಪಾಲ್ಗೊಳ್ಳುವಂತೆ ಸಚಿವಾಲಯ ಮನವಿ ಮಾಡಿದೆ.
ಅಭಿಯಾನಲ್ಲಿ ಏನಿರಲಿದೆ?
ನ.27 ರಿಂದ ಡಿ.31 - ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಚರ್ಚೆ, ಪ್ರಬಂಧ ಸ್ಪರ್ಧೆಗಳು ಮತ್ತು ಪ್ರತಿಜ್ಞೆ ಸಮಾರಂಭಗಳು ಸೇರಿದಂತೆ ಜಾಗೃತಿ ಚಟುವಟಿಕೆಗಳು.
ಜನವರಿ 1 ರಿಂದ 31- ಮಕ್ಕಳ ಹಕ್ಕುಗಳು, ಸುರಕ್ಷತೆ ಮತ್ತು ಸಬಲೀಕರಣದ ಬಗ್ಗೆ ಸಮುದಾಯದ ಪ್ರಭಾವಿಗಳು, ನಾಯಕರ ಜೊತೆ ತೊಡಗಿಸಿಕೊಳ್ಳುವುದು.
ಫೆ.1 ರಿಂದ ಮಾ.8 - ಗ್ರಾಮ ಪಂಚಾಯತ್‌ಗಳು ಮತ್ತು ಪುರಸಭೆಯ ವಾರ್ಡ್‌ಗಳು ತಮ್ಮ ನ್ಯಾಯವ್ಯಾಪ್ತಿಗಳನ್ನು ಬಾಲ್ಯವಿವಾಹ ಮುಕ್ತವೆಂದು ಘೋಷಿಸುವಂತೆ ನಿರ್ಣಯ ಕೈಗೊಳ್ಳುವುದು.

