ನವದೆಹಲಿ: ಕೇಂದ್ರ ಸರ್ಕಾರವು ಮೊಬೈಲ್‌ಗಳಲ್ಲಿ 'ಸಂಚಾರ ಸಾಥಿ' ಆಯಪ್ ಅಳವಡಿಕೆಯನ್ನು ಕಡ್ಡಾಯಗೊಳಿಸಿದ ಬೆನ್ನಲ್ಲೇ, ಮಂಗಳವಾರ ಒಂದೇ ದಿನ ಆಯಪ್ ಡೌನ್‌ಲೋಡ್ ಮಾಡಿಕೊಂಡವರ ಪ್ರಮಾಣ 10 ಪಟ್ಟು ಏರಿಕೆಯಾಗಿದೆ ಎಂದು ದೂರಸಂಪರ್ಕ ಸಚಿವಾಲಯದ ಮೂಲಗಳು ತಿಳಿಸಿವೆ.
'ಸಂಚಾರ ಸಾಥಿ' ಆಯಪ್‌ಗೆ ಸಾರ್ವಜನಿಕರಿಂದ ಇದ್ದಕ್ಕಿದ್ದಂತೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಆಯಪ್ ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದ ದೈನಂದಿನ ಸರಾಸರಿ ಪ್ರಮಾಣ 60 ಸಾವಿರದಿಂದ 6 ಲಕ್ಷಕ್ಕೆ ಏರಿಕೆಯಾಗಿದೆ' ಎಂದು ಹೆಸರು ಹೇಳಲು ಇಚ್ಛಿಸದ ದೂರಸಂಪರ್ಕ ಸಚಿವಾಲಯದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕೇಂದ್ರ ಸರ್ಕಾರವು 'ಸಂಚಾರ ಸಾಥಿ' ಆಯಪ್ ಅಳವಡಿಕೆಯನ್ನು ಕಡ್ಡಾಯಗೊಳಿಸುವುದಕ್ಕೂ ಮುನ್ನ 1.5 ಕೋಟಿ ಜನರು ಆಯಪ್ ಡೌನ್‌ಲೋಡ್ ಮಾಡಿದ್ದರು. ಸ್ಮಾರ್ಟ್‌ಫೋನ್‌ಗಳಲ್ಲಿ 'ಸಂಚಾರ ಸಾಥಿ' ಆಯಪ್ ಅಳವಡಿಕೆ ಕಡ್ಡಾಯ ಎಂದು ಕೇಂದ್ರ ದೂರಸಂಪರ್ಕ ಸಚಿವಾಲಯವು ನವೆಂಬರ್ 28ರಂದು ಆದೇಶ ಹೊರಡಿಸಿತ್ತು.
'ಭಾರತದಲ್ಲಿ ತಯಾರಾಗುವ ಅಥವಾ ಆಮದು ಮಾಡಿಕೊಳ್ಳಲಾಗುವ ಎಲ್ಲ ಮೊಬೈಲ್ ಗಳಲ್ಲಿಯೂ 'ಸಂಚಾರ ಸಾಥಿ' ಆಯಪ್ ಅನ್ನು ಮೊದಲೇ ಇನ್‌ಸ್ಟಾಲ್ ಮಾಡಿರಬೇಕು. ಈಗಾಗಲೇ ಮಾರುಕಟ್ಟೆಯಲ್ಲಿರುವ (ಇನ್ನೂ ಖರೀದಿಯಾಗದ) ಮೊಬೈಲ್‌ಗಳಲ್ಲಿ ಮೊದಲ ಸಾಫ್ಟ್‌ವೇರ್ ಅಪ್‌ಡೇಟ್ ವೇಳೆ ಈ ಆಯಪ್ ಅನ್ನು ಬಳಕೆದಾರರಿಗೆ ನೀಡಬೇಕು' ಎಂದು ಸಚಿವಾಲಯ ಹೇಳಿದೆ.
'ಈ ಆಯಪ್ ಅನ್ನು ಮೊದಲೇ 'ಇನ್‌ಸ್ಟಾಲ್' ಮಾಡಿರುವ ಹೊಸ ಮೊಬೈಲ್‌ಗಳನ್ನು 'ಸೆಟ್ಟಿಂಗ್' ಮಾಡಿಕೊಳ್ಳುವಾಗಲೇ ಬಳಕೆದಾರರಿಗೆ ಈ ಆಯಪ್ ಇರುವುದು ಸುಲಭವಾಗಿ ಕಾಣುವಂತೆ ಮಾಡಬೇಕು. ಈ ಆಯಪ್‌ನ ಕಾರ್ಯಾಚರಣೆಯನ್ನು ಡಿಸೇಬಲ್ ಮಾಡುವುದಾಗಲೀ ಅಥವಾ ನಿರ್ಬಂಧಿಸುವುದಾಗಲೀ ಮಾಡುವಂತಿಲ್ಲ' ಎಂದು ಆದೇಶದಲ್ಲಿ ಹೇಳಲಾಗಿದೆ.
'ತಯಾರಿಕಾ ಕಂಪನಿಗಳು ಮತ್ತು ಮೊಬೈಲ್‌ಗಳನ್ನು ಆಮದು ಮಾಡಿಕೊಳ್ಳುವ ಕಂಪನಿಗಳು ಆದೇಶ ಪ್ರಕಟವಾದ 120 ದಿನಗಳ ಒಳಗೆ ಆಯಪ್ ಇನ್‌ಸ್ಟಾಲ್ ಆದ ಕುರಿತು ವರದಿ ನೀಡಬೇಕು' ಎಂದೂ ಹೇಳಿದೆ.
ಮೊಬೈಲ್‌ಗಳಲ್ಲಿ 'ಸಂಚಾರ ಸಾಥಿ' ಆಯಪ್ ಅಳವಡಿಕೆಯನ್ನು ಕಡ್ಡಾಯ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದ್ದು, 'ಇದು ಸರ್ವಾಧಿಕಾರಕ್ಕೆ ಸಮಾನವಾದ ನಡೆ' ಎಂದು ಕಿಡಿಕಾರಿದ್ದವು.
'ಜನರ ಧ್ವನಿಯನ್ನು ಹತ್ತಿಕ್ಕಲು ಬಿಜೆಪಿ ಮಾಡಿದ ಮತ್ತೊಂದು ಪ್ರಯತ್ನ ಇದಾಗಿದೆ. ಜನರ ಖಾಸಗಿತನ ರಕ್ಷಿಸಬೇಕಾದದ್ದು ಸರ್ಕಾರದ ಕರ್ತವ್ಯ. ಯಾವುದನ್ನಾದರೂ ಕಡ್ಡಾಯಗೊಳಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಉಂಟುಮಾಡುತ್ತದೆ' ಎಂದು ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿತ್ತು.




