ಶಬರಿಮಲೆ: ಶಬರಿಮಲೆ ಸನ್ನಿಧಾನ ಸಮೀಪದ ಆಲದ ಮರದಲ್ಲಿ ರವಿವಾರ (ಡಿ.7) ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳದ ಸಕಾಲಿಕ ಮಧ್ಯಪ್ರವೇಶದಿಂದ ಯಾವುದೇ ಹಾನಿ ಸಂಭವಿಸಿಲ್ಲ.
ಭಾನುವಾರ ಬೆಳಗ್ಗೆ 8.20ರ ಸುಮಾರಿಗೆ ಆಲದ ಮರದ ಮೇಲೆ ಅಲಂಕಾರಕ್ಕಾಗಿ ಅಳವಡಿಸಲಾದ ಎಲ್‌ಇಡಿ ದೀಪಗಳಿಂದ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿತು.
ಸನ್ನಿಧಾನಂ ಅಗ್ನಿಶಾಮಕ ದಳದ ನಿಯಂತ್ರಣ ದಳದ ಸಿಬಂದಿ ಮತ್ತು ನಾಗರಿಕ ರಕ್ಷಣ ತಂಡದ ಸದಸ್ಯರು ಕೂಡಲೇ ಕಾರ್ಯಾಚರಣೆ ಆರಂಭಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.
ಈ ಘಟನೆ ಸಂದರ್ಭ ಮುನ್ನೆಚ್ಚರಿಕೆಯಾಗಿ, ಬೆಂಕಿ ಪೂರ್ಣ ನಂದಿಸುವವರೆಗೆ ದೇಗುಲದ ಪವಿತ್ರ 18 ಮೆಟ್ಟಿಲು ಪ್ರವೇಶವನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಲಾಯಿತು. ಅನಂತರ ಎಂದಿನಂತೆ ದೇವರ ದರ್ಶನ ಮುಂದುವರಿಯಿತು.

