HEALTH TIPS

ಕ್ರೀಡೆಯಲ್ಲಿ 2014ಕ್ಕೂ ಮೊದಲು ಇದ್ದ ಸ್ವಜನ ಪಕ್ಷಪಾತ ಕೊನೆಯಾಗಿದೆ: ಪ್ರಧಾನಿ ಮೋದಿ

 ನವದೆಹಲಿ: ಕ್ರೀಡೆಯಲ್ಲಿ 2014ಕ್ಕೂ ಮೊದಲು ನಡೆಯುತ್ತಿದ್ದ ಅಕ್ರಮಗಳು ದಶಕಗಳ ಹಿಂದೆಯೇ ಕೊನೆಗೊಂಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದೇಶದ ಯುವಕರಲ್ಲಿ ಕ್ರೀಡಾ ಸಂಸ್ಕೃತಿ ಮತ್ತು ನಾಯಕತ್ವವನ್ನು ಉತ್ತೇಜಿಸುವ ಉದ್ದೇಶ ಹೊಂದಿರುವ 'ಸಂಸದ್‌ ಖೇಲ್‌ ಮಹೋತ್ಸವ್‌' ಕಾರ್ಯಕ್ರಮವನ್ನುದ್ದೇಶಿಸಿ ಮೋದಿ ಮಾತನಾಡಿದ್ದಾರೆ. 


ಕ್ರೀಡೆ ಮತ್ತು ಫಿಟ್‌ನೆಸ್‌ ಉತ್ಸವವಾಗಿರುವ ಈ ಉಪಕ್ರಮದ ಮೂಲಕ, ದೇಶದಲ್ಲಿ ಸಾವಿರಾರು ಪ್ರತಿಭಾವಂತ ಕ್ರೀಡಾಪಟುಗಳು ಸೃಷ್ಟಿಯಾಗುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

'ಯುವ ಸಬಲೀಕರಣ ಮತ್ತು ರಾಷ್ಟ್ರ ನಿರ್ಮಾಣದ ನಿಟ್ಟಿನಲ್ಲಿ ಈ ಉತ್ಸವವು ಆದಾರಸ್ಥಂಭವಾಗಿ ರೂಪುಗೊಳ್ಳುತ್ತಿದೆ. ಸಂಸದ್‌ ಖೇಲ್‌ ಮಹೋತ್ಸವದ ಮತ್ತೊಂದು ವಿಶೇಷ ಅಂಶವೆಂದರೆ, ಇದು ಸಾಮಾಜಿಕ ಮನಸ್ಥಿತಿಯನ್ನು ಬದಲಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ' ಎಂದು ಹೇಳಿದ್ದಾರೆ.

'ತಂಡಗಳ ಆಯ್ಕೆ ಹಾಗೂ ಕ್ರೀಡಾ ಮೂಲಸೌಕರ್ಯದ ವಿಚಾರದಲ್ಲಿ 2014ಕ್ಕೂ ಮೊದಲು ಅಕ್ರಮಗಳು ನಡೆಯುತ್ತಿದ್ದವು. ಅಂತಹ ಅಭ್ಯಾಸಗಳು ಇದೀಗ ಕೊನೆಗೊಂಡಿವೆ. ಇಂದು, ಅತ್ಯಂತ ಬಡಕುಟುಂಬದ ಮಕ್ಕಳೂ ಕಠಿಣ ಪರಿಶ್ರಮ ಹಾಗೂ ಪ್ರತಿಭೆಯ ಮೂಲಕ ಎತ್ತರದ ಹಂತಕ್ಕೆ ತಲುಪಲು ಸಾಧ್ಯವಿದೆ' ಎಂದು ತಿಳಿಸಿದ್ದಾರೆ.

ದೇಶದ ಬಜೆಟ್‌ನಲ್ಲಿ ಕ್ರೀಡೆಗಾಗಿ ₹ 3,000 ಕೋಟಿ ನೀಡಲಾಗುತ್ತಿದೆ. ಈ ಮೊತ್ತವು 2014ಕ್ಕೂ ಮೊದಲು ₹ 1,200 ಕೋಟಿಗೂ ಕಡಿಮೆ ಇತ್ತು ಎಂದು ಒತ್ತಿ ಹೇಳಿದ್ದಾರೆ.

'ನೀವು ಕೇವಲ ನಿಮ್ಮ ಗೆಲುವಿಗಾಗಿ ಆಡುತ್ತಿಲ್ಲ. ದೇಶಕ್ಕಾಗಿ ಆಡುತ್ತಿದ್ದೀರಿ. ತ್ರಿವರ್ಣ ಧ್ವಜದ ಗೌರವ ಮತ್ತು ಘನತೆಗಾಗಿ ಆಡುತ್ತಿದ್ದೀರಿ ಎಂಬುದನ್ನು ದೇಶದ ಎಲ್ಲ ಕ್ರೀಡಾಪಟುಗಳಿಗೆ ಹೇಳಲು ಬಯಸುತ್ತೇನೆ' ಎಂದಿರುವ ಪ್ರಧಾನಿ, ಮಕ್ಕಳು ಕ್ರೀಡೆಯಲ್ಲಿ ತೊಡಗಿಕೊಳ್ಳಲು ಎಲ್ಲ ಪೋಷಕರು ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದ್ದಾರೆ.








ಕ್ರೀಡೆ ಕೇವಲ ಕಲಿಕೆಯ ಭಾಗವಷ್ಟೇ ಅಲ್ಲ. ಅದು ದೇಹದ ಆರೋಗ್ಯ ಮತ್ತು ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವುದಕ್ಕೆ ಅತ್ಯವಶ್ಯಕ ಎಂದು ಪ್ರತಿಪಾದಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries