ಪಣಜಿ: ಉತ್ತರ ಗೋವಾದಲ್ಲಿ ಕಿಕ್ಕಿರಿದು ತುಂಬಿದ್ದ ನೈಟ್‌ಕ್ಲಬ್‌ನಲ್ಲಿ ಮಧ್ಯರಾತ್ರಿಯ ವೇಳೆ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಐವರು ಪ್ರವಾಸಿಗರು ಸೇರಿದಂತೆ ಕನಿಷ್ಠ 25 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸ್ಫೋಟದ ಬಳಿಕ ಕ್ಷಣಾರ್ಧದಲ್ಲಿ ಬೆಂಕಿ ತಗುಲಿ ಮೂರು ಮಂದಿ ಸುಟ್ಟ ಗಾಯಗಳಿಂದ, ಇತರರು ಹೊಗೆಯಿಂದ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಗೊಂಡ ಆರು ಮಂದಿಯಲ್ಲಿ ಐವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪೊಲೀಸರ ಪ್ರಾಥಮಿಕ ಮಾಹಿತಿಯಂತೆ, ಮೃತರಲ್ಲಿ 20 ಮಂದಿ ನೈಟ್‌ಕ್ಲಬ್ ಸಿಬ್ಬಂದಿ ಸೇರಿದ್ದಾರೆ. ಅವರೆಲ್ಲ ಉತ್ತರಾಖಂಡ, ಜಾರ್ಖಂಡ್, ಅಸ್ಸಾಂ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಿಗೆ ಸೇರಿದ್ದಾರೆ. ನಾಲ್ವರು ನೇಪಾಳದ ಪ್ರಜೆಗಳು. ಪ್ರವಾಸಿಗರಲ್ಲಿ ದಿಲ್ಲಿಯಿಂದ ಬಂದ ನಾಲ್ವರು ಸೇರಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ನೈಟ್‌ಕ್ಲಬ್ ಅಗ್ನಿ ಸುರಕ್ಷತಾ ನಿಯಮಗಳನ್ನೇ ಪಾಲಿಸದೆ ಕಾರ್ಯನಿರ್ವಹಿಸುತ್ತಿದ್ದುದು ಗಂಭೀರ ಲೋಪ ಎಂದು ಸೂಚಿಸಿದ್ದಾರೆ. ನೆಲ ಮಹಡಿ ಮತ್ತು ಅಡುಗೆಮನೆಯಲ್ಲಿ ಸಿಲುಕಿಕೊಂಡಿದ್ದವರು ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ ಉಸಿರುಗಟ್ಟಿದ ಪರಿಣಾಮ ಹೆಚ್ಚಿನ ಮೃತ್ಯು ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.
ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ತಲುಪಲು ಕಿರಿದಾದ ರಸ್ತೆಗಳು ಅಡ್ಡಿಯಾದ ಅಡಚಣೆಯಾಗಿದ್ದು, ಟ್ಯಾಂಕರ್ ಗಳನ್ನು 400 ಮೀಟರ್ ದೂರದಲ್ಲಿ ನಿಲ್ಲಿಸಬೇಕಾದ ಪರಿಸ್ಥಿತಿ ಉಂಟಾಯಿತು. ಇದರಿಂದ ರಕ್ಷಣಾ ಕಾರ್ಯಾಚರಣೆಯಲ್ಲಿ ವಿಳಂಬ ಸಂಭವಿಸಿತು ಎಂದು ತಿಳಿದುಬಂದಿದೆ.
ಘಟನೆಯನಂತರ ನೈಟ್‌ಕ್ಲಬ್‌ನ ಆಡಳಿತ ಮಂಡಳಿಯ ಮುಖ್ಯ ಜಿ.ಎಂ., ಜಿ.ಎಂ., ಬಾರ್ ಮ್ಯಾನೇಜರ್ ಮತ್ತು ಗೇಟ್ ಮ್ಯಾನೇಜರ್‌ರನ್ನು ಪೊಲೀಸರು ಬಂಧಿಸಿದ್ದಾರೆ. ಕ್ಲಬ್ ಮಾಲೀಕರು ಹಾಗೂ ಕಾರ್ಯಕ್ರಮದ ಆಯೋಜಕರ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಇದೇ ವೇಳೆ, 2023ರಲ್ಲಿ ಸುರಕ್ಷತಾ ಲೋಪಗಳಿದ್ದರೂ ನೈಟ್‌ಕ್ಲಬ್ ನ ಕಾರ್ಯಾಚರಣೆ ಅನುಮತಿ ನೀಡಿದ ಕಾರಣಕ್ಕೆ ಗೋವಾ ಸರ್ಕಾರ ಮೂವರು ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ದಕ್ಷಿಣ ಗೋವಾ ಕಲೆಕ್ಟರ್‌ರನ್ನು ಮುಖ್ಯಸ್ಥರನ್ನಾಗಿ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಉಪ ನಿರ್ದೇಶಕರು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯ ನಿರ್ದೇಶಕರನ್ನೊಳಗೊಂಡ ತನಿಖಾ ಸಮಿತಿಯನ್ನು ರಚಿಸಲಾಗಿದ್ದು, ಒಂದು ವಾರದಲ್ಲಿ ವರದಿ ಸಲ್ಲಿಸಲು ಸೂಚಿಸಲಾಗಿದೆ.
ರಾಜ್ಯ ಸರ್ಕಾರ ಮೃತರ ಕುಟುಂಬಗಳಿಗೆ 5 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ 50,000 ರೂಪಾಯಿ ಪರಿಹಾರ ಘೋಷಿಸಿದೆ. ಮೃತದೇಹಗಳನ್ನು ಅವರ ಸ್ವಗ್ರಾಮಗಳಿಗೆ ಕಳುಹಿಸಲು ಸಕಲ ಸಿದ್ಧತೆಗಳನ್ನು ಮಾಡಲಾಗಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ದುರಂತಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿಗಳು, ರಾಜ್ಯದಾದ್ಯಂತ ಅನುಮತಿಯಿಲ್ಲದೆ ಕಾರ್ಯನಿರ್ವಹಿಸುತ್ತಿರುವ ನೈಟ್‌ಕ್ಲಬ್ ಹಾಗೂ ಇತರ ಜನಸೇರುವ ಪ್ರದೇಶಗಳ ಪರಿಶೀಲನೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಇಂತಹ ಘಟನೆಗಳ ಪುನರಾವರ್ತನೆ ತಡೆಯಲು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.




