HEALTH TIPS

3 ಸಾವಿರ ಎಕರೆ ಪ್ರದೇಶದಲ್ಲಿ ಭಾಭಾ ಪರಮಾಣು ಸಂಶೋಧನಾ ಕೇಂದ್ರ ಸ್ಥಾಪಿಸಲು ಯೋಜನೆ

ಅಮರಾವತಿ: ಅನಕಪಲ್ಲಿ ಜಿಲ್ಲೆಯ 3 ಸಾವಿರ ಎಕರೆ ಪ್ರದೇಶದಲ್ಲಿ ಭಾಭಾ ಪರಮಾಣು ಸಂಶೋಧನಾ ಕೇಂದ್ರವು(ಬಾರ್ಕ್) ತನ್ನ ಸಂಶೋಧನೆ ಮತ್ತು ಅಭಿವೃದ್ಧಿ ಕ್ಯಾಂಪಸ್‌ ಸ್ಥಾಪಿಸಲು ಯೋಜನೆ ರೂಪಿಸಿದೆ.

ವಿಶಾಖಪಟ್ಟಣದ ಉಪ ನಗರವಾದ ಅನಕಪಲ್ಲಿಯ ಪೂರ್ವ ಕರಾವಳಿ ಪ್ರದೇಶದಲ್ಲಿ ಬಾರ್ಕ್‌, ಸಂಶೋಧನೆ ಮತ್ತು ಅಭಿವೃದ್ಧಿ ಕ್ಯಾಂಪಸ್ ನಿರ್ಮಾಣಕ್ಕೆ ಯೋಜಿಸಿದ್ದು, ಈ ಸಂಬಂಧ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಿದೆ.

ಕ್ಯಾಂಪಸ್‌ ನಿರ್ಮಾಣಕ್ಕೆ 148.15 ಹೆಕ್ಟೇರ್‌ (366 ಎಕರೆ) ಅರಣ್ಯ‌ ಜಮೀನನ್ನು ಬಳಸಿಕೊಳ್ಳಲು ಅನುಮತಿ ನೀಡುವಂತೆ ಆಂಧ್ರಪ್ರದೇಶ ಸರ್ಕಾರವನ್ನು ಕೇಳಿರುವುದಾಗಿ ಸಚಿವಾಲಯದ ಮೂಲಗಳು ತಿಳಿಸಿವೆ.

ಸಚಿವಾಲಯದ ಅಡಿಯಲ್ಲಿರುವ ತಜ್ಞರ ಮೌಲ್ಯಮಾಪನ ಸಮಿತಿ (ಇಎಸಿ), ಈ ಪ್ರಸ್ತಾವವನ್ನು ಪರಿಶೀಲಿಸಿ, ಉದ್ದೇಶಿತ ಅರಣ್ಯ ಜಮೀನನ್ನು ಅರಣ್ಯೇತರ ಉದ್ದೇಶಗಳ ಬಳಕೆಗೆ ಅನುಮತಿ ನೀಡಲು 'ತಾತ್ವಿಕ ಅನುಮೋದನೆ'ಗಾಗಿ ಶಿಫಾರಸು ಮಾಡಿದೆ.

'ಭಾಭಾ ಪರಮಾಣು ಸಂಶೋಧನಾ ಕೇಂದ್ರವು ಕಾರ್ಯತಂತ್ರದ ಕಾರಣಗಳಿಗಾಗಿ ವಿಶಾಖಪಟ್ಟಣ ಸಮೀಪದ ಪೂರ್ವ ಕರಾವಳಿಯಲ್ಲಿ ಹೊಸ ಕ್ಯಾಂಪಸ್ ಸ್ಥಾಪಿಸುತ್ತಿದೆ. ಸ್ಥಳ ಆಯ್ಕೆ ಸಮಿತಿಯ ಶಿಫಾರಸು ಆಧರಿಸಿ ಕ್ಯಾಂಪಸ್‌ ನಿರ್ಮಾಣಕ್ಕೆ ಸ್ಥಳವನ್ನು ಆಯ್ಕೆ ಮಾಡಲಾಗಿದ್ದು, ಇದು ಪರಮಾಣು ಶಕ್ತಿ ಆಯೋಗದಿಂದ ಅನುಮೋದಿಸಲ್ಪಟ್ಟಿದೆ' ಎಂದು ಇಎಸಿ ಸಭಾ ನಡಾವಳಿಯಲ್ಲಿ ಉಲ್ಲೇಖಿಸಿದೆ.

'ಈ ಕ್ಯಾಂಪಸ್‌ಗಾಗಿ ಈಗಾಗಲೇ 1200 ಹೆಕ್ಟೇರ್‌ಗಳಿಗೂ ಹೆಚ್ಚು (ಸುಮಾರು 3 ಸಾವಿರ ಎಕರೆ) ಕಂದಾಯ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಪ್ರಸ್ತಾಪಿತ 148.15 ಹೆಕ್ಟೇರ್ ಅರಣ್ಯ ಜಮೀನು, ಈಗ ಸ್ವಾಧೀನಪಡಿಸಿ ಕೊಂಡಿರುವ ಜಮೀನುಗಳ ಪಕ್ಕದಲ್ಲಿದೆ ಹಾಗೂ ಯೋಜನಾ ಸ್ಥಳ ಮತ್ತು ಸಮುದ್ರದ ನಡುವೆ ಇದೆ' ಎಂದು ಇಎಸಿ ತಿಳಿಸಿದೆ.

ಯೋಜನೆಗಾಗಿ ಸ್ವಾಧೀನಪಡಿಸಿಕೊಡಿರುವ ಜಮೀನಿನಲ್ಲಿ 21,244 ಮರಗಳಿದ್ದು, ಅದರಲ್ಲಿ ಕ್ಯಾಂಪಸ್ ನಿರ್ಮಾಣಕ್ಕಾಗಿ 1,722 ಮರಗಳನ್ನು ಕತ್ತರಿಸಲಾಗುತ್ತದೆ. ಸಮುದ್ರಕ್ಕೆ ಸಮೀಪದ ಪ್ರದೇಶಗಳಲ್ಲಿರುವ ಮರಗಳನ್ನು ಕಡಿಯುವುದಿಲ್ಲ. ಇದರಿಂದ ಪರಿಸರ ವ್ಯವಸ್ಥೆಯ ಮೇಲೆ ಪರಿಣಾಮಬೀರುವುದಿಲ್ಲ ಎಂದು ಇಎಸಿ ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries