HEALTH TIPS

5ನೇ ದಿನವೂ ಮುಂದುವರಿದ ಇಂಡಿಗೊ ಬಿಕ್ಕಟ್ಟು: ಟಿಕೆಟ್‌ ಮೊತ್ತ ಮರುಪಾವತಿಗೆ ಆದೇಶ

ನವದೆಹಲಿ: ಇಂಡಿಗೊಗೆ ಸೇರಿದ ವಿಮಾನಗಳ ಹಾರಾಟದಲ್ಲಿನ ವ್ಯತ್ಯಯವು ಐದನೇ ದಿನವಾದ ಶನಿವಾರವೂ ಮುಂದುವರಿದಿದೆ. ಇದರ ಬೆನ್ನಲ್ಲೇ ರದ್ದಾದ ವಿಮಾನಗಳ ಟಿಕೆಟ್‌ ಮೊತ್ತವನ್ನು ಪೂರ್ಣವಾಗಿ ಪ್ರಯಾಣಿಕರಿಗೆ ಮರುಪಾವತಿಸಬೇಕು ಎಂದು ಸರ್ಕಾರ ನಿರ್ದೇಶಿಸಿದೆ. 

'ಸಂಚಾರ ರದ್ದಾದ ವಿಮಾನಗಳ ಟೆಕಟ್‌ ಮೊತ್ತವನ್ನು ಪ್ರಯಾಣಿಕರಿಗೆ ಭಾನುವಾರದೊಳಗೆ ಪೂರ್ಣವಾಗಿ ಮರುಪಾವತಿಸಬೇಕು' ಎಂದು ನಾಗರಿಕ ವಿಮಾನಯಾನ ಸಚಿವಾಲಯವು ಶನಿವಾರ ಇಂಡಿಗೊ ವಿಮಾನಯಾನ ಸಂಸ್ಥೆಗೆ ತಿಳಿಸಿದೆ.

'ಅಲ್ಲದೆ ಪ್ರಯಾಣಿಕರ ಸರಕು, ಸಾಮಗ್ರಿಗಳನ್ನು ಮುಂದಿನ ಎರಡು ದಿನಗಳಲ್ಲಿ (48 ಗಂಟೆಗಳಲ್ಲಿ) ಪತ್ತೆ ಹಚ್ಚಿ ಪ್ರಯಾಣಿಕರ ವಿಳಾಸಕ್ಕೆ ತಲುಪಿಸಬೇಕು' ಎಂದೂ ಸಚಿವಾಲಯ ಶನಿವಾರ ಸೂಚಿಸಿದೆ. ಶುಕ್ರವಾರ 1000ಕ್ಕೂ ಹೆಚ್ಚು, ಶನಿವಾರ 400ಕ್ಕೂ ಹೆಚ್ಚು ಇಂಡಿಗೊದ ವಿಮಾನಗಳ ಸಂಚಾರ ರದ್ದಾಗಿದ್ದವು.

ವಿಳಂಬ ಸಲ್ಲ...

'ಪ್ರಯಾಣಿಕರಿಗೆ ಮರುಪಾವತಿ ಪ್ರಕ್ರಿಯೆ ವಿಳಂಬವಾಗಬಾರದು. ಭಾನವಾರ ರಾತ್ರಿ 8 ಗಂಟೆಯೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ಇಲ್ಲದಿದ್ದರೆ ಸಂಸ್ಥೆ ವಿರುದ್ಧ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ' ಎಂದು ಸಚಿವಾಲಯ ಎಚ್ಚರಿಕೆ ನೀಡಿದೆ.

ರದ್ದಾದ ವಿಮಾನಗಳ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮತ್ತೊಂದು ದಿನಕ್ಕೆ ಮರು ಹೊಂದಿಸಲು ಬಯಸಿದರೆ, ಅದಕ್ಕೆ ಮರು ವೇಳಾಪಟ್ಟಿಯ ಶುಲ್ಕ ವಿಧಿಸಬಾರದು ಎಂದೂ ಅದು ಸೂಚಿಸಿದೆ. ವಿಮಾನ ಕಾರ್ಯಾಚರಣೆಗಳು ಯಥಾಸ್ಥಿತಿಗೆ ಬರುವವರೆಗೆ ಸ್ವಯಂ ಚಾಲಿತ ಮರುಪಾವತಿ ವ್ಯವಸ್ಥೆ ಸಕ್ರಿಯವಾಗಿರುತ್ತದೆ ಎಂದು ಅದು ಹೇಳಿದೆ.

400ಕ್ಕೂ ಹೆಚ್ಚು ವಿಮಾನ ಸಂಚಾರ ರದ್ದು...

ದೇಶದ ನಾಲ್ಕು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ 400ಕ್ಕೂ ಹೆಚ್ಚು ಇಂಡಿಗೊ ವಿಮಾನಗಳ ಸಂಚಾರ ರದ್ದಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಪೈಕಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 124 (63 ನಿರ್ಗಮನ, 61 ಆಗಮನ), ಮುಂಬೈ ವಿಮಾನ ನಿಲ್ದಾಣದಲ್ಲಿ 109 (51 ನಿರ್ಗಮನ, 58 ಆಗಮನ), ದೆಹಲಿ ವಿಮಾನ ನಿಲ್ದಾಣದಲ್ಲಿ 106 (54 ನಿರ್ಗಮನ, 52 ಆಗಮನ), ಹೈದರಾಬಾದ್‌ ವಿಮಾನ ನಿಲ್ದಾಣದಲ್ಲಿ 66 ಇಂಡಿಗೊ ವಿಮಾನಗಳ ಹಾರಾಟ ರದ್ದುಗೊಂಡಿವೆ ಎಂದು ಮೂಲಗಳು ಮಾಹಿತಿ ನೀಡಿವೆ.

ಸಿಇಒ ಕ್ಷಮೆಯಾಚನೆ...

ಐದು ದಿನಗಳಿಂದ ಇಂಡಿಗೊ ವಿಮಾನಯಾನದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ವಿಡಿಯೊ ಸಂದೇಶ ರವಾನಿಸಿರುವ ಇಂಡಿಗೊ ವಿಮಾನಯಾನ ಸಂಸ್ಥೆಯ ಸಿಇಒ ಪೀಟರ್‌ ಎಲ್ಬರ್ಸ್‌, 'ಅಡಚಣೆಗಳಿಂದ ಪ್ರಯಾಣಿಕರಿಗೆ ಆದ ಅನಾನುಕೂಲಕ್ಕೆ ಕ್ಷಮೆಯಾಚಿಸುತ್ತೇವೆ' ಎಂದಿದ್ದಾರೆ.

ಶುಕ್ರವಾರ 1000ಕ್ಕೂ ಹೆಚ್ಚು ವಿಮಾನ ಹಾರಾಟ ರದ್ದಾಗಿತ್ತು. ಶನಿವಾರ ಆ ಸಂಖ್ಯೆ ಕಡಿಮೆ ಆಗುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

'ನಿರ್ದಿಷ್ಟ ದರ ಮಿತಿ ಪಾಲಿಸಿ'

ನವದೆಹಲಿ: ಇಂಡಿಗೊ ವಿಮಾನಗಳ ಸಂಚಾರ ರದ್ದಾದ ಸಂದರ್ಭವನ್ನು ಬಳಸಿಕೊಂಡು ದೇಶದ ಹಲವು ವಿಮಾನಯಾನ ಸಂಸ್ಥೆಗಳು ದರ ಏರಿಸಿರುವುದನ್ನು ಗಮನಿಸಿರುವ ನಾಗರಿಕ ವಿಮಾನಯಾನ ಸಚಿವಾಲಯ ನಿರ್ದಿಷ್ಟ ದರ ಮಿತಿಗಳನ್ನು ಪಾಲಿಸುವಂತೆ ದೇಶದ ಎಲ್ಲ ವಿಮಾನಯಾನ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ. '500 ಕಿ.ಮೀನಿಂದ 1000 ಕಿ.ಮೀವರೆಗಿನ ವಿಮಾನ ಪ್ರಯಾಣಕ್ಕೆ ₹7500 ದರ 1000-1500 ಕಿ.ಮೀವರೆಗಿನ ಪ್ರಯಾಣಕ್ಕೆ ₹15000 ಹಾಗೂ 1500 ಕಿ.ಮೀಗಿಂತ ಹೆಚ್ಚಿನ ವಿಮಾನಯಾನಕ್ಕೆ ₹18000 ದರ ಮಿತಿಯನ್ನು ನಿಗದಿಪಡಿಸಿ ಸರ್ಕಾರ ಆದೇಶಿಸಿದೆ. 'ಪರಿಸ್ಥಿತಿ ಸಂಪೂರ್ಣ ಸ್ಥಿರವಾಗುವ ತನಕ ಈ ದರ ಮಿತಿ ಅನ್ವಯವಾಗುತ್ತದೆ. ಈ ಮಿತಿ ಬ್ಯುಸಿನೆಸ್‌ ಕ್ಲಾಸ್‌ ಟಿಕೆಟ್‌ಗಳು ಮತ್ತು ಉಡಾನ್‌ ವಿಮಾನಗಳಿಗೆ ಅನ್ವಯವಾಗುವುದಿಲ್ಲ' ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಈ ದರ ಮಿತಿ ತಕ್ಷಣದಿಂದಲೇ ಜಾರಿಗೆ ಬರಲಿದೆ. ಪ್ರಯಾಣಿಕರು ತೆರಿಗೆ ಬಳಕೆದಾರರ ಅಭಿವೃದ್ಧಿ ಶುಲ್ಕ ಮತ್ತು ಸೇವಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದೆ. 'ಸಂಕಷ್ಟದ ಸಂದರ್ಭದಲ್ಲಿ ಅವಕಾಶವಾದಿತನ ಮೆರೆಯದೆ ಪ್ರಯಾಣಿಕರನ್ನು ರಕ್ಷಿಸಬೇಕಿದೆ. ಇದಕ್ಕಾಗಿ ಎಲ್ಲ ಸಂಸ್ಥೆಗಳು ನಿರ್ದಿಷ್ಟ ದರ ಮಿತಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು' ಎಂದು ಸಚಿವಾಲಯ ಶನಿವಾರ ನಿರ್ದೇಶಿಸಿದೆ. ನಿಯಂತ್ರಕ ಅಧಿಕಾರ ಬಳಸಿದ ಸಚಿವಾಲಯ: 'ಸಂಕಷ್ಟದ ಸಮಯದಲ್ಲಿ ಪ್ರಯಾಣಿಕರಿಗೆ ನಷ್ಟವಾಗದಂತೆ ರಕ್ಷಿಸಲು ಎಲ್ಲ ಬಾಧಿತ ಮಾರ್ಗಗಳಲ್ಲಿ ನ್ಯಾಯಯುತ ಮತ್ತು ಸಮಂಜಸವಾದ ದರಗಳ ಮಿತಿಯನ್ನು ನಿಗದಿ ಮಾಡಲಾಗಿದೆ. ಇದಕ್ಕಾಗಿ ಸಚಿವಾಲಯ ತನ್ನ ನಿಯಂತ್ರಕ ಅಧಿಕಾರವನ್ನು ಬಳಸಿಕೊಂಡಿದೆ' ಎಂದು ನಾಗರಿಕ ವಿಮಾನಯಾನ ಸಚಿವ ಕೆ. ರಾಮ್‌ಮೋಹನ್‌ ನಾಯ್ಡು ಪ್ರತಿಕ್ರಿಯಿಸಿದರು. 'ಸಚಿವಾಲಯವು ದರ ಮಟ್ಟವನ್ನು ನಿಕಟವಾಗಿ ಮೇಲ್ವಿಚಾರಣೆ ನಡೆಸುತ್ತಿರುತ್ತದೆ. ನಿಗದಿತ ಮಾನದಂಡಗಳನ್ನು ಉಲ್ಲಂಘಿಸಿದರೆ ತಕ್ಷಣವೇ ಕ್ರಮ ತೆಗೆದುಕೊಳ್ಳಲಾಗುತ್ತದೆ' ಎಂದು ಅವರು ಎಚ್ಚರಿಸಿದರು. 'ಮಾರುಕಟ್ಟೆಯಲ್ಲಿ ದರದ ಶಿಸ್ತನ್ನು ಕಾಪಾಡಿಕೊಳ್ಳುವುದು ಸಂಕಷ್ಟದಲ್ಲಿರುವ ಪ್ರಯಾಣಿಕರಿಗೆ ಶೋಷಣೆ ಆಗದಂತೆ ನೋಡಿಕೊಳ್ಳುವುದು ಹಿರಿಯ ನಾಗರಿಕರು ವಿದ್ಯಾರ್ಥಿಗಳು ರೋಗಿಗಳು ಸೇರಿದಂತೆ ತುರ್ತಾಗಿ ಪ್ರಯಾಣಿಸಬೇಕಾದ ನಾಗರಿಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗದಂತೆ ನೋಡಿಕೊಳ್ಳುವ ಉದ್ದೇಶವನ್ನು ಈ ನಿರ್ದೇಶನ ಒಳಗೊಂಡಿದೆ' ಎಂದು ಅವರು ವಿವರಿಸಿದರು.

ಪೈಲಟ್‌ಗಳ ಸಂಘದ ಆಕ್ಷೇಪ

ಇಂಡಿಗೊ ವಿಮಾನಯಾನ ಸಂಸ್ಥೆಗೆ ತಾತ್ಕಾಲಿಕವಾಗಿ ವಿಶ್ರಾಂತಿ ನೀತಿಯ ತಡೆಗೆ ಅವಕಾಶ ಕಲ್ಪಿಸಿರುವ ಡಿಜಿಸಿಎ ವಿರುದ್ಧ ಏರ್‌ಲೈನ್ಸ್‌ ಪೈಲಟ್‌ಗಳ ಸಂಘ (ಎಎಲ್‌ಪಿಎ) ಆಕ್ಷೇಪ ವ್ಯಕ್ತಪಡಿಸಿದೆ. ಹೀಗೆ ನಿಯಮಗಳ ಸಡಿಲಿಕೆಯು ಸಮಾನತೆಯನ್ನು ನಾಶಪಡಿಸುತ್ತದೆ ಅಲ್ಲದೆ ಲಕ್ಷಾಂತರ ಪ್ರಯಾಣಿಕರನ್ನು ಹೆಚ್ಚಿನ ಅಪಾಯಕ್ಕೆ ಸಿಲುಕಿಸುತ್ತದೆ ಎಂದು ಹೇಳಿದೆ. 'ಆಯಾಸ ತಗ್ಗಿಸುವ ಮಾನದಂಡಗಳ ಜಾರಿಗೊಳಿಸುವಿಕೆಯನ್ನು ಕಡ್ಡಾಯಗೊಳಿಸುವ ಕುರಿತು ನ್ಯಾಯಾಲಯ ನೀಡಿದ್ದ ನಿರ್ದೇಶನಗಳಿಗೆ ವಿರುದ್ಧವಾದ ಕ್ರಮವನ್ನು ಡಿಜಿಸಿಎ ತೆಗೆದುಕೊಂಡಿದೆ' ಎಂದು ಸಂಘ ಆರೋಪಿಸಿದೆ.

37 ರೈಲುಗಳಲ್ಲಿ 116 ಹೆಚ್ಚುವರಿ ಕೋಚ್‌ಗಳ ಅವಳಡಿಕೆ

ನವದೆಹಲಿ: ಇಂಡಿಗೊ ವಿಮಾನಗಳ ರದ್ದತಿಯಿಂದ ಉಂಟಾದ ಪ್ರಯಾಣಿಕರ ಬೇಡಿಕೆಯನ್ನು ನಿರ್ವಹಿಸಲು ಭಾರತೀಯ ರೈಲ್ವೆ ದೇಶದಾದ್ಯಂತ 37 ಪ್ರೀಮಿಯಂ ರೈಲುಗಳಲ್ಲಿ 116 ಹೆಚ್ಚುವರಿ ಕೋಚ್‌ಗಳನ್ನು ಅಳವಡಿಸಿದೆ. ಅಲ್ಲದೆ ಕೆಲ ಮಾರ್ಗಗಳಲ್ಲಿ ವಿಶೇಷ ರೈಲು ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ. ದಕ್ಷಿಣ ರೈಲ್ವೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಂದರೆ 18 ರೈಲುಗಳ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಹೆಚ್ಚುವರಿ 'ಚೇರ್‌ಕಾರ್‌' ಮತ್ತು 'ಸ್ಲೀಪರ್‌ ಕ್ಲಾಸ್‌' ಕೋಚ್‌ಗಳನ್ನು ಅಳವಡಿಸಲಾಗಿದೆ. ಉತ್ತರ ರೈಲ್ವೆಯ ಎಂಟು ರೈಲುಗಳಲ್ಲಿ 3ಎಸಿ ಮತ್ತು 'ಚೇರ್‌ ಕಾರ್‌' ಕೋಚ್‌ಗಳನ್ನು ಸೇರಿಸಲಾಗಿದೆ. ಪಶ್ಚಿಮ ರೈಲ್ವೆಯು ಹೆಚ್ಚಿನ ಬೇಡಿಕೆಯಿರುವ ನಾಲ್ಕು ರೈಲುಗಳಲ್ಲಿ ಹೆಚ್ಚುವರಿ 3ಎಸಿ ಮತ್ತು 2ಎಸಿ ಕೋಚ್‌ಗಳನ್ನು ಜೋಡಿಸಲಾಗಿದೆ.

ನಾಲ್ಕು ವಿಶೇಷ ರೈಲು (ಹೈದರಾಬಾದ್‌ಪಿಟಿಐ): ದಕ್ಷಿಣ ಮಧ್ಯ ರೈಲ್ವೆಯು ಶನಿವಾರ ನಾಲ್ಕು ವಿಶೇಷ ರೈಲುಗಳನ್ನು ಓಡಿಸುವುದಾಗಿ ಘೋಷಿಸಿದೆ. ಹೈದರಾಬಾದ್‌ನಿಂದ ಚೆನ್ನೈ ಮುಂಬೈ ಶಾಲಿಮಾರ್‌ಗೆ (ಕೋಲ್ಕತ್ತ) ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ತಗ್ಗಿಸಲು ಶನಿವಾರ ವಿಶೇಷ ರೈಲುಗಳನ್ನು ಓಡಿಸುತ್ತಿರುವುದಾಗಿ ದಕ್ಷಿಣ ಮಧ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries