HEALTH TIPS

ಹಿಂಸಾಚಾರಕ್ಕೆ ತಿರುಗಿದ ಕಲ್ಲಿದ್ದಲು ಗಣಿ ವಿರೋಧಿ ಪ್ರತಿಭಟನೆ: ಹಲವು ಪೊಲೀಸರಿಗೆ ಗಾಯ, ವಾಹನಗಳಿಗೆ ಬೆಂಕಿ

ರಾಯಗಢ: ಛತ್ತೀಸ್‌ ಗಢದ ರಾಯಗಢ ಜಿಲ್ಲೆಯ ತಮ್ನಾರ್ ಪ್ರದೇಶದಲ್ಲಿ ಕಲ್ಲಿದ್ದಲು ಗಣಿಗಾರಿಕೆ ಯೋಜನೆ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ಶನಿವಾರ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದ್ದು, ಹಲವಾರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಪ್ರತಿಭಟನಾಕಾರರು ಸರಕಾರಿ ಹಾಗೂ ಖಾಸಗಿ ವಾಹನಗಳಿಗೆ ಬೆಂಕಿ ಹಚ್ಚಿ, ಆಸ್ತಿ ನಾಶಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಭಟನಾಕಾರರ ಗುಂಪು ಜಿಂದಾಲ್ ಪವರ್ ಲಿಮಿಟೆಡ್‌ಗೆ ಸೇರಿದ ಕಲ್ಲಿದ್ದಲು ನಿರ್ವಹಣಾ ಘಟಕಕ್ಕೆ ನುಗ್ಗಿ ಎರಡು ಟ್ರ್ಯಾಕ್ಟರ್‌ಗಳು ಸೇರಿದಂತೆ ಹಲವು ವಾಹನಗಳಿಗೆ ಬೆಂಕಿ ಹಚ್ಚಿದೆ. ಘಟಕದ ಕಚೇರಿ ಆವರಣವನ್ನೂ ಧ್ವಂಸಗೊಳಿಸಲಾಗಿದೆ.

ಜಿಲ್ಲಾಡಳಿತದ ಹೇಳಿಕೆಯಂತೆ, ತಮ್ನಾರ್ ಪ್ರದೇಶದ ಗೇರ್ ಪೆಲ್ಮಾ ಸೆಕ್ಟರ್-I ಕಲ್ಲಿದ್ದಲು ಬ್ಲಾಕ್ ವ್ಯಾಪ್ತಿಗೆ ಒಳಪಡುವ 14 ಹಳ್ಳಿಗಳ ನಿವಾಸಿಗಳು, ಡಿಸೆಂಬರ್ 8ರಂದು ಧೌರಭಟದಲ್ಲಿ ನಡೆದ ಸಾರ್ವಜನಿಕ ವಿಚಾರಣೆಗೆ ವಿರೋಧ ವ್ಯಕ್ತಪಡಿಸಿ, ಡಿ. 12ರಿಂದ ಲಿಬ್ರಾ ಗ್ರಾಮದ ಸಿಎಚ್‌ಪಿ ಚೌಕ್‌ನಲ್ಲಿ ಧರಣಿ ನಡೆಸುತ್ತಿದ್ದರು.

ಶನಿವಾರ ಬೆಳಿಗ್ಗೆ ಸುಮಾರು 300 ಮಂದಿ ಪ್ರತಿಭಟನಾಕಾರರು ಸ್ಥಳದಲ್ಲಿ ಜಮಾಯಿಸಿ, ರಸ್ತೆ ತಡೆದು ಸಂಚಾರಕ್ಕೆ ಅಡ್ಡಿಪಡಿಸಿದರು. ಈ ಸಂದರ್ಭದಲ್ಲಿ ಉದ್ವಿಗ್ನತೆ ಹೆಚ್ಚಾಗಿ ಕಲ್ಲು ತೂರಾಟ ನಡೆದಿದೆ. ಪ್ರತಿಭಟನಾಕಾರರ ದಾಳಿಯಲ್ಲಿ ಉಪವಿಭಾಗೀಯ ಪೊಲೀಸ್ ಅಧಿಕಾರಿ ಅನಿಲ್ ವಿಶ್ವಕರ್ಮ, ತಮ್ನಾರ್ ಪೊಲೀಸ್ ಠಾಣೆಯ ಉಸ್ತುವಾರಿ ಕಮಲಾ ಪುಸಮ್ ಹಾಗೂ ಒಬ್ಬ ಕಾನ್‌ಸ್ಟೆಬಲ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಹಿಳಾ ಸಿಬ್ಬಂದಿ ಸೇರಿದಂತೆ ಇನ್ನೂ ಹಲವರು ಗಾಯಗೊಂಡಿದ್ದಾರೆ.

ಪ್ರತಿಭಟನಾಕಾರರು ಪೊಲೀಸ್ ಬಸ್‌, ಜೀಪ್‌ ಹಾಗೂ ಆಂಬ್ಯುಲೆನ್ಸ್‌ ಗೆ ಬೆಂಕಿ ಹಚ್ಚಿದ್ದು, ಹಲವಾರು ಇತರ ಸರಕಾರಿ ವಾಹನಗಳಿಗೂ ಹಾನಿಯಾಗಿದೆ. ಬಳಿಕ ಗುಂಪು ಕಲ್ಲಿದ್ದಲು ನಿರ್ವಹಣಾ ಘಟಕದತ್ತ ಒಳನುಗ್ಗಿ ಮತ್ತೊಮ್ಮೆ ಬೆಂಕಿ ಹಚ್ಚಿದೆ ಎಂದು ತಿಳಿದು ಬಂದಿದೆ.

ಸ್ಥಳೀಯ ಶಾಸಕಿ ವಿದ್ಯಾವತಿ ಸಿದರ್‌, ರಾಯಗಢ ಜಿಲ್ಲಾಧಿಕಾರಿ ಮಾಯಾಂಕ್ ಚತುರ್ವೇದಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾಂಗ್ ಪಟೇಲ್ ಅವರು ಪರಿಸ್ಥಿತಿ ಶಮನಗೊಳಿಸಲು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪರಿಸ್ಥಿತಿ ಪ್ರಸ್ತುತ ನಿಯಂತ್ರಣದಲ್ಲಿದ್ದು, ಯಾವುದೇ ಅಹಿತಕರ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪ್ರದೇಶದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries