ನವದೆಹಲಿ: ತುರ್ತು ಸಂದರ್ಭದಲ್ಲಿ ಫೈಟರ್ ಜೆಟ್ನಿಂದ ಪೈಲಟ್ ಅಥವಾ ಸಿಬ್ಬಂದಿ ಹೊರ ಹಾರಲೆಂದು ವಿಶೇಷವಾದ ಏರ್ಕ್ರಾಫ್ಟ್ ಎಸ್ಕೇಪ್ ಸಿಸ್ಟಂ ಇರುತ್ತದೆ. ಈ ಎಸ್ಕೇಪ್ ಸಿಸ್ಟಂನ ಪರೀಕ್ಷೆ ಮಾಡುವ ವ್ಯವಸ್ಥೆ ಮತ್ತು ಸಾಮರ್ಥ್ಯ ಕೆಲವೇ ದೇಶಗಳಿಗೆ ಇರುವುದು.
ಈ ನಾಲ್ಕೈದು ದೇಶಗಳ ಸಾಲಿಗೆ ಭಾರತವೂ ಸೇರ್ಪಡೆಯಾಗಿದೆ. ಇಂದು ಫೈಟರ್ ಜೆಟ್ನ ಎಸ್ಕೇಪ್ ಸಿಸ್ಟಂ ಅನ್ನು ಹೈಸ್ಪೀಡ್ ರಾಕೆಟ್ ಸ್ಲೆಡ್ ಮೂಲಕ ಪರೀಕ್ಷೆ ಮಾಡಲಾಯಿತು. ಡಿಆರ್ಡಿಒ ನಡೆಸಿದ ಈ ಮಹತ್ವದ ಪರೀಕ್ಷೆ ಯಶಸ್ವಿಯಾಗಿದೆ.
ಸಂಪೂರ್ಣ ಸಿಬ್ಬಂದಿ ರಕ್ಷಣೆ ಸೇರಿದಂತೆ ಹಲವು ಸುರಕ್ಷತಾ ಮಾನದಂಡಗಳನ್ನು ಇಟ್ಟುಕೊಂಡು, ರಾಕೆಟ್ ಸ್ಲೆಡ್ ಟೆಸ್ಟ್ ಮೂಲಕ ಎಸ್ಕೇಪ್ ಸಿಸ್ಟಂ ಅನ್ನು ಕಠಿಣ ಪರೀಕ್ಷೆಗೆ ಒಳಪಡಿಸಲಾಯಿತು.
ಡಿಆರ್ಡಿಒ ದೇಶೀಯವಾಗಿ ಈ ಪರೀಕ್ಷಾ ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ. ಇವತ್ತು ನಡೆಸಲಾದ ರಾಕೆಟ್ ಸ್ಲೆಡ್ ಟೆಸ್ಟ್ನಲ್ಲಿ ಏರ್ಕ್ರಾಫ್ಟ್ ಎಸ್ಕೆಪ್ ಸಿಸ್ಟಂ ಅನ್ನು ರಾಕೆಟ್ ಪ್ರೊಪಲ್ಷನ್ ಸಾಧನಕ್ಕೆ ಜೋಡಿಸಲಾಯಿತು. ನಂತರ ಅದನ್ನು ಎರಡು ಹಳಿಗಳ ಮೇಲೆ ನಿಯಂತ್ರಿತ ವೇಗದಲ್ಲಿ ಓಡಸಲಾಯಿತು. ಆಕಾಶದಲ್ಲಿ ಫೈಟರ್ ಜೆಟ್ ಓಡುವಷ್ಟು ವೇಗವನ್ನು ರಾಕೆಟ್ ಪ್ರೊಪಲ್ಷನ್ ನೆರವಿನಿಂದ ಎಸ್ಕೇಪ್ ಸಿಸ್ಟಂಗೆ ನೀಡಲಾಯಿತು.
ವರದಿಗಳ ಪ್ರಕಾರ, ಏರ್ಕ್ರಾಫ್ಟ್ ಎಸ್ಕೇಪ್ ಸಿಸ್ಟಂ ಅನ್ನು ಗಂಟೆಗೆ 800 ಕಿಮೀ ವೇಗದಲ್ಲಿ ಹಳಿಗಳ ಮೇಲೆ ಚಲಾಯಿಸುವಂತೆ ನೋಡಿಕೊಳ್ಳಲಾಯಿತು. ಈ ಭಾರೀ ವೇಗ ನಡುವೆ ಏರ್ಕ್ರಾಫ್ಟ್ ಕ್ಯಾನೋಪಿ ಬೇರ್ಪಡುವುದು, ನಂತರ ಎಜೆಕ್ಟ್ ಮಾಡುವುದು, ಹಾಗೂ ಪ್ಯಾರಚೂಟ್ ಮೂಲಕ ಸಿಬ್ಬಂದಿ ಸುರಕ್ಷಿತವಾಗಿ ಇಳಿಯುವುದು, ಇವೆಲ್ಲ ಕಾರ್ಯಗಳು ಯಶಸ್ವಿಯಾಗಿ ನಡೆದವು.
ಇಲ್ಲಿ ನಿಜವಾದ ಪೈಲಟ್ ಅಥವಾ ಸಿಬ್ಬಂದಿ ಇರಲಿಲ್ಲ. ಡಮ್ಮಿ ಮಾತ್ರ ಇರಿಸಲಾಗಿತ್ತು. ಆದರೆ, ಏರ್ಕ್ರಾಫ್ಟ್ನಿಂದ ಇಜೆಕ್ಟ್ ಆಗಿ ಪ್ಯಾರಚೂಟ್ ತೆರೆಯುವುದು ಇತ್ಯಾದಿ ಎಲ್ಲವೂ ನಿಜವಾಗಿಯೇ ನಡೆದವು.
ಚಂಡೀಗಡದ ಟರ್ಮಿನಲ್ ಬ್ಯಾಲಿಸ್ಟಿಕ್ಸ್ ರಿಸರ್ಚ್ ಲ್ಯಾಬೊರೇಟರಿಯ (ಟಿಬಿಆರ್ಎಲ್) ರೈಲ್ ಟ್ರ್ಯಾಕ್ ರಾಕೆಟ್ ಸ್ಲೆಡ್ ಘಟಕದಲ್ಲಿ ಈ ಪರೀಕ್ಷೆಯನ್ನು ನಡೆಸಲಾಗಿದೆ. ಡಿಆರ್ಡಿಒದ ಈ ಪ್ರಯೋಗದಲ್ಲಿ ಎಡಿಎ, ಹೆಚ್ಎಎಲ್ ಸಂಸ್ಥೆಗಳೂ ಕೂಡ ಕೈಜೋಡಿಸಿವೆ.
ಬ್ರಿಟನ್, ಅಮೆರಿಕ, ಚೀನಾ ಮತ್ತು ರಷ್ಯಾ ದೇಶಗಳು ಮಾತ್ರವೇ ಈ ಅಡ್ವಾನ್ಸ್ಡ್ ಟೆಸ್ಟಿಂಗ್ ಫೆಸಿಲಿಟಿ ಹೊಂದಿರುವುದು. ಈಗ ಭಾರತವೂ ಕೂಡ ಈ ಸಾಲಿಗೆ ಸೇರಿಕೊಂಡಿದೆ. ಭಾರತವು ಫೈಟರ್ ಜೆಟ್ಗಳ ತಯಾರಿಕೆಯಲ್ಲಿ ಪೂರ್ಣ ಸ್ವಾವಲಂಬನೆ ಸಾಧಿಸಲು ಇದು ಮಹತ್ವದ ಅಂಶ ಎನಿಸಿದೆ. ಏರ್ಕ್ರಾಫ್ಟ್ ಎಸ್ಕೇಪ್ ಸಿಸ್ಟಂ ಅನ್ನು ಪರೀಕ್ಷಿಸಲು ವಿದೇಶಗಳ ಮೇಲೆ ಅವಲಂಬಿತವಾಗುವ ಅವಶ್ಯಕತೆ ಇರುವುದಿಲ್ಲ.




