HEALTH TIPS

ಸಂಚಾರ ಸಾಥಿ; ಇದು ಗೂಢಾಚಾರಿಕೆಯ ಭಾಗ: ಸರ್ಕಾರದ ವಿರುದ್ಧ ವಿಪಕ್ಷಗಳ ವಾಗ್ದಾಳಿ

ನವದೆಹಲಿ: ಕೇಂದ್ರ ಸರ್ಕಾರವು ಮೊಬೈಲ್‌ಗಳಲ್ಲಿ 'ಸಂಚಾರ ಸಾಥಿ' ಆಯಪ್‌ ಅಳವಡಿಕೆಯನ್ನು ಕಡ್ಡಾಯ ಮಾಡಿದ ಬೆನ್ನಲ್ಲೇ, ಕಾಂಗ್ರೆಸ್‌ ಸೇರಿದಂತೆ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, 'ಇದು ಸರ್ವಾಧಿಕಾರಕ್ಕೆ ಸಮಾನವಾದ ನಡೆ' ಎಂದು ಕಿಡಿಕಾರಿವೆ.

ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್‌, 'ಜನರ ಧ್ವನಿಯನ್ನು ಹತ್ತಿಕ್ಕಲು ಬಿಜೆಪಿ ಮಾಡಿದ ಮತ್ತೊಂದು ಪ್ರಯತ್ನ ಇದಾಗಿದೆ' ಎಂದು ಆರೋಪಿಸಿದೆ.

'ಜನರ ಖಾಸಗೀತನ ರಕ್ಷಿಸಬೇಕಾದದ್ದು ಸರ್ಕಾರದ ಕರ್ತವ್ಯ. ಯಾವುದನ್ನಾದರೂ ಕಡ್ಡಾಯಗೊಳಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಉಂಟುಮಾಡುತ್ತದೆ' ಎಂದು ಆಕ್ಷೇಪ ವ್ಯಕ್ತಪಡಿಸಿದೆ.

'ದಬ್ಬಾಳಿಕೆ ಆಡಳಿತ'

'ಜನರ ಹಕ್ಕುಗಳಿಗೆ ಚ್ಯುತಿ ಉಂಟುಮಾಡುವುದು, ನಿಯಂತ್ರಿಸುವುದು, ಗೂಢಚಾರಿಕೆ ಮಾಡುವುದು, ಕಣ್ಗಾವಲು ನಡೆಸುವುದು ಬಿಜೆಪಿ ದಬ್ಬಾಳಿಕೆ ಆಡಳಿತದ ವಿಶಿಷ್ಟ ಲಕ್ಷಣವಾಗಿದೆ' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

'ಸಾರ್ವಜನಿಕರ ಧ್ವನಿಯನ್ನು ಹತ್ತಿಕ್ಕಲು ಬಿಜೆಪಿ ಮಾಡಿದ ಹಲವು ಪ್ರಯತ್ನಗಳ ಪಟ್ಟಿಗೆ ಸಂಚಾರ ಸಾಥಿ ಆಯಪ್‌ ಮತ್ತೊಂದು ಸೇರ್ಪಡೆಯಾಗಿದೆ. ಜನರನ್ನು ಮತ್ತು ವಿವಿಧ ಪಾಲುದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಈ ಆಯಪ್‌ ಅನ್ನು ಅಪ್‌ಲೋಡ್‌ ಮಾಡಲು ಮೋದಿ ಸರ್ಕಾರ ತೆಗೆದುಕೊಂಡಿರುವ ತೀರ್ಮಾನ ಏಕಪಕ್ಷೀಯ. ಈ ಕುರಿತ ನಿರ್ದೇಶನಗಳು ಸರ್ವಾಧಿಕಾರಕ್ಕೆ ಸಮಾನವಾಗಿವೆ' ಎಂದು ಅವರು ಕಿಡಿಕಾರಿದ್ದಾರೆ.

'ನಾಗರಿಕರು ತಮ್ಮ ಕುಟುಂಬ ಮತ್ತು ಸ್ನೇಹಿತರ ಜತೆ ಏನು ಮಾತನಾಡುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಸರ್ಕಾರ ಏಕೆ ಬಯಸುತ್ತಿದೆ' ಎಂದು ಅವರು ಪ್ರಶ್ನಿಸಿದ್ದಾರೆ.

'ನಾಗರಿಕರ ಖಾಸಗೀತನವನ್ನು ಮೂಲಭೂತ ಹಕ್ಕಾಗಿ ಘೋಷಿಸುವುದಕ್ಕೆ ಮೋದಿ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ತೀವ್ರವಾಗಿ ವಿರೋಧಿಸಿತ್ತು. ಹೀಗಾಗಿ ಈಗಿನ ಸರ್ಕಾರದ ನಡೆ ಆಶ್ವರ್ಯವೆನಿಸಿಲ್ಲ. ಇದು ಸರ್ವಾಧಿಕಾರತ್ವವನ್ನು ತೋರಿಸುತ್ತದೆ' ಎಂದು ಖರ್ಗೆ ಕಿಡಿಕಾರಿದ್ದಾರೆ.

'ಇದು ಗೂಢಚಾರಿ ಆಯಪ್‌'

ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಈ ಅಪ್ಲಿಕೇಷನ್‌ ಅನ್ನು 'ಗೂಢಚಾರಿ ಆಯಪ್‌' ಎಂದು ಟೀಕಿಸಿದ್ದಾರೆ. 'ಸರ್ಕಾರ ಎಲ್ಲದರ ಮೇಲೂ ನಿಗಾ ಇಡಲಾರಂಭಿಸಿದರೆ ಜನರ ಖಾಸಗೀತನ ಎಲ್ಲಿ ಉಳಿಯುತ್ತದೆ?' ಎಂದು ಅವರು ಆಕ್ಷೇಪಿಸಿದ್ದಾರೆ.

ಕಾಂಗ್ರೆಸ್‌ನ ಹಿರಿಯ ಸಂಸದ ಶಶಿ ತರೂರ್‌ ಅವರೂ ಸರ್ಕಾರದ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದು, 'ಪ್ರಜಾಪ್ರಭುತ್ವದಲ್ಲಿ ಯಾವುದೇ ವಿಷಯವನ್ನು ಕಡ್ಡಾಗೊಳಿಸುವುದು ಸರಿಯಲ್ಲ. ಅಪ್ಲಿಕೇಷನ್‌ಗಳ ಡೌನ್‌ಲೋಡ್‌ ವಿಷಯವು ಬಳಕೆದಾರರ ಆಯ್ಕೆಗೆ ಬಿಡುವುದು ಸೂಕ್ತ' ಎಂದು ಅಭಿಪ್ರಾಯಪಟ್ಟಿದ್ದಾರೆ.

'ಇದೇನು ಕಣ್ಗಾವಲು ರಾಜ್ಯವೇ?'

'ಸಂಚಾರ ಸಾಥಿ ಅಳವಡಿಕೆ ವಿಚಾರವು, ಪ್ರತಿ ಮೊಬೈಲ್‌ನಲ್ಲಿ ಅಧಿಕೃತವಾಗಿ 'ಪೆಗಾಸಸ್' ಅಥವಾ ಉತ್ತರ ಕೊರಿಯಾದ 'ರೆಡ್‌ಫ್ಲ್ಯಾಗ್‌' ಅಪ್ಲಿಕೇಷನ್‌ ಅಳವಡಿಸಿದಂತೆ ಆಗುತ್ತದೆಯೇ? ಭಾರತ ಈಗ ಕಣ್ಗಾವಲು ಅಥವಾ ಪೊಲೀಸ್‌ ರಾಜ್ಯವಾಗಿ ಬದಲಾಗಿದೆಯೇ? ಖಾಸಗೀತನ, ಗೋಪ್ಯತೆ ಮತ್ತು ವೈಯಕ್ತಿಕ ಹಕ್ಕುಗಳು ಅಧಿಕೃತವಾಗಿ ಸತ್ತಿವೆಯೇ?' ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸುರ್ಜೇವಾಲಾ ಪ್ರಶ್ನಿಸಿದ್ದಾರೆ.

'ಖಾಸಗೀತನವು ಜನರ ಜೀವನ ಮತ್ತು ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಭಾಗವಾಗಿದೆ. ಇದಕ್ಕೆ ಚ್ಯುತಿ ಬಾರದಂತೆ ಸರ್ಕಾರ ನಡೆದುಕೊಳ್ಳಬೇಕು' ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಆಗ್ರಹಿಸಿದ್ದಾರೆ.

ಲಜ್ಜೆಗೆಟ್ಟ ದಾಳಿ; ಎಎಪಿ ಕಿಡಿ

'ಸರ್ಕಾರದ ಈ ನಡೆಯು ವೈಯಕ್ತಿಕ, ಖಾಸಗೀತನ ಮತ್ತು ಸ್ವಾತಂತ್ರ್ಯದ ಮೇಲಿನ ಲಜ್ಜೆಗೆಟ್ಟ ದಾಳಿಯಾಗಿದೆ. ಜಗತ್ತಿನ ಯಾವುದೇ ಪ್ರಜಾಪ್ರಭುತ್ವದ ದೇಶವು ಹೀಗೆ ಮಾಡಲು ಪ್ರಯತ್ನಿಸಿಲ್ಲ' ಎಂದು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಹರಿಹಾಯ್ದಿದ್ದಾರೆ.

'ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಅಪ್ಲಿಕೇಷನ್‌ ಅನ್ನು ಅಳಿಸುವ ಕುರಿತು ಯಾವುದೇ ಉಲ್ಲೇಖವಿಲ್ಲ. ಇದು ಸರ್ವಾಧಿಕಾರಿ ಕ್ರಮವಾಗಿದ್ದು, ಎಎಪಿ ತೀವ್ರವಾಗಿ ಖಂಡಿಸುತ್ತದೆ. ತಕ್ಷಣವೇ ಸರ್ಕಾರ ಈ ಅಧಿಸೂಚನೆಯನ್ನು ಹಿಂದಕ್ಕೆ ಪಡೆಯಬೇಕು' ಎಂದು ಅವರು ಆಗ್ರಹಿಸಿದ್ದಾರೆ.

ಈ ಕುರಿತು ಸಿಪಿಐ(ಎಂ) ರಾಜ್ಯಸಭಾ ಸದಸ್ಯ ಜಾನ್‌ ಬ್ರಿಟ್ಟಾಸ್‌ ಅವರು ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಪತ್ರ ಬರೆದಿದ್ದು, 'ಆಯಪ್‌ ಅನ್ನು ಕಡ್ಡಾಯವಾಗಿ ಅಳವಡಿಸಿದ ಬಳಿಕ, ಅದನ್ನು ಅಳಿಸಲು ಅನುಮತಿ ನೀಡಿದರೂ, ಮೊಬೈಲ್‌ ಫೋನ್‌ ನಿರಂತರ ಡಿಜಿಟಲ್‌ ಮೇಲ್ವಿಚಾರಣೆಯ ಸಂಭಾವ್ಯ ಸಾಧನವಾಗಿ ಪರಿವರ್ತನೆಯಾಗಿರುತ್ತದೆ' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

'ಆಯಪ್‌ ಬಳಕೆ ಐಚ್ಛಿಕವಾಗಿದೆ ಎಂಬುದಾದರೆ, ಅದನ್ನು ಡೌನ್‌ಲೋಡ್‌ ಮಾಡುವಂತೆ ತಯಾರಕರಿಗೆ ಕಡ್ಡಾಯಗೊಳಿಸುವ ಅಗತ್ಯವೇನಿದೆ? ಮೊಬೈಲ್‌ಗಳಲ್ಲಿ ಡೌನ್‌ಲೋಡ್‌ ಆಗಿರುವ ಈ ಆಯಪ್‌ನ ಬಳಕೆಯನ್ನು ಅಳಿಸುವುದು ವೃದ್ಧರು ಮತ್ತು ಡಿಜಿಟಲ್‌ ಜ್ಞಾನ ಕಡಿಮೆ ಇರುವವರಿಗೆ ಸಾಧ್ಯವಾಗದೇ ಇರಬಹುದು. ಆಗ ಈ ಆಯಪ್‌ ಶಾಶ್ವತವಾಗಿ ಚಾಲ್ತಿಯಲ್ಲಿರುತ್ತದೆ. ಇದರಿಂದ ಖಾಸಗಿತನ ಸೋರಿಕೆ, ದತ್ತಾಂಶ ಸೋರಿಕೆ ಅಗುತ್ತದೆ' ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries