ಕಾಸರಗೋಡು: ಕನ್ನಡದ ಅವಗಣನೆಯನ್ನು ಪ್ರತಿಭಟಿಸಿ ಮತ್ತು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕಾಸರಗೋಡಿನ ವಿವಿಧ ಕನ್ನಡ ಸಂಘಟನೆಗಳ ನೇತೃತ್ವದಲ್ಲಿ ನಡೆದ ಗಡಿನಾಡ ಕನ್ನಡಿಗರ ಕಾಸರಗೋಡು ಜಿಲ್ಲಾಧಿಕಾರಿ ಕಛೇರಿ ಧರಣಿ ಮುಷ್ಕರವನ್ನು ಯಶಸ್ವಿಗೊಳಿಸಿದ ಕಾಸರಗೋಡಿನ ಸಮಸ್ತ ಕನ್ನಡಿಗರಿಗೆ ಧರಣಿಯ ಸಂಘಟಕ ಸಮಿತಿ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಕರ್ನಾಟಕ ಸಮಿತಿ ಅಧ್ಯಕ್ಷ ಕೆ.ಮುರಳೀಧರ ಬಳ್ಳಕ್ಕುರಾಯ ಅಧ್ಯಕ್ಷತೆ ವಹಿಸಿದ್ದರು. ಮಾಯಿಪ್ಪಾಡಿ ಶಿಕ್ಷಕರ ತರಬೇತಿ ಕೇಂದ್ರದ ವಿದ್ಯಾರ್ಥಿಗಳು, ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಕಾಸರಗೋಡಿನ ಸಮಸ್ತ ಕನ್ನಡಿಗರು ಒಗ್ಗಟ್ಟಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದರಿಂದ ಧರಣಿ ಯಶಸ್ಸಿಗೆ ಕಾರಣವಾರುವುದಾಗಿ ಸಭೆಯಲ್ಲಿ ಅಭಿಪ್ರಾಯಪಡಲಾಯಿತು. ಲೋಕಸೇವಾ ಆಯೋಗದ ನಿವೃತ್ತ ಅಧೀನ ಕಾರ್ಯದರ್ಶಿ ಗಣೇಶ್ ಪ್ರಸಾದ್ ಪಾಣೂರು ಸಭೆಯಲ್ಲಿ ಲೆಕ್ಕಪತ್ರ ಮಂಡಿಸಿದರು. ಸಮಸ್ಯೆ ಪರಿಹಾರಕ್ಕಾಗಿ ಕನ್ನಡಿಗರು ಮುಂದೆ ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಗಮಕ ಕಲಾ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ತೆಕ್ಕೇಕೆರೆ ಶಂಕರನಾರಾಯಣ ಭಟ್, ಲೋಕಸೇವಾ ಆಯೋಗದ ನಿವೃತ್ತ ಅಧಿಕಾರಿ ಯು.ಶಾಮರಾವ್,ಪತ್ರಕರ್ತ ವೀಜಿ ಕಾಸರಗೋಡು, ನಿವೃತ್ತ ಪ್ರಾಂಶುಪಾಲ ಬೇ.ಸಿ ಗೋಪಾಲಕೃಷ್ಣ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ, ಮೀಯಪದವು ಹೈಯರ್ ಸೆಕೆಂಡರಿ ಶಾಲಾ ಶಿಕ್ಷಕ ರಾಜಾರಾಮ ಕಾಟಿಪಳ್ಳ ಮೊದಲಾದವರು ಉಪಸ್ಥಿತರಿದ್ದರು.




