ತಿರುವನಂತಪುರಂ: 'ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ ಸಂಸ್ಥೆಗೂ ಮಿತಿಗಳಿರುತ್ತವೆ. ಆರೋಗ್ಯಪೂರ್ಣ ಪ್ರಜಾಪ್ರಭುತ್ವ ಕಾರ್ಯನಿರ್ವಹಣೆಯು ಆ ಮಿತಿಗಳನ್ನು ಅರಿಯುವುದು ಮತ್ತು ಗೌರವಿಸುವುದರ ಮೇಲೆ ಅವಲಂಬಿತವಾಗಿದೆ' ಎಂದು ಕೇರಳದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅಭಿಪ್ರಾಯಪಟ್ಟರು.
ಕಾನೂನು ಟ್ರಸ್ಟ್ (ಕಾನೂನು ನೆರವು ಮತ್ತು ಕಲ್ಯಾಣ ಟ್ರಸ್ಟ್) ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮತ್ತು ಕೇರಳದ ಮಾಜಿ ರಾಜ್ಯಪಾಲ ಪಿ.ಸದಾಶಿವಂ ಅವರಿಗೆ 'ನ್ಯಾಯಮೂರ್ತಿ ವಿ.ಆರ್ ಕೃಷ್ಣಅಯ್ಯರ್ ಪ್ರಶಸ್ತಿ' ಪ್ರದಾನ ಮಾಡಿ ಅವರು ಮಾತನಾಡಿದರು. ಕಾನೂನು ಟ್ರಸ್ಟ್ ಈ ಪ್ರಶಸ್ತಿಯನ್ನು ಸ್ಥಾಪಿಸಿದೆ.
ಕೇರಳದ ಎರಡು ತಾಂತ್ರಿಕ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳ ನೇಮಕಕ್ಕೆ ತಲಾ ಒಬ್ಬರ ಹೆಸರು ಶಿಫಾರಸು ಮಾಡಲು ನಿವೃತ್ತ ನ್ಯಾ. ಸುಧಾಂಶು ಧೂಲಿಯಾ ನೇತೃತ್ವದ ಸಮಿತಿ ರಚನೆಗೆ ಸುಪ್ರೀಂ ಕೋರ್ಟ್ ನಿರ್ದೇಶನದ ನಂತರ, ಈ ಬಗ್ಗೆ ರಾಜ್ಯಪಾಲರು ಮತ್ತು ಕೇರಳ ಮುಖ್ಯಮಂತ್ರಿ ನಡುವಿನ ಬಿಕ್ಕಟ್ಟು ಪರಿಹರಿಸುವ ದಿಸೆಯಲ್ಲಿ ಅರ್ಲೇಕರ್ ಈ ರೀತಿ ಹೇಳಿದ್ದಾರೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸದಾಶಿವಂ, 'ಸಮಾಜವು ಹೆಚ್ಚು ಹೆಚ್ಚು ಡಿಜಿಟಲ್ ಆಗುತ್ತಿದ್ದರೂ, ಕೋರ್ಟ್‌ಗಳು, ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅವರ ಮಾನವತಾವಾದಿ ಆದರ್ಶಗಳಿಗೆ ಬದ್ಧವಾಗಿರಬೇಕು' ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೇರಳ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಎಚ್. ನಗರೇಶ್, ಕೆ. ಬಾಬು ಮತ್ತು ಎ.ಬದರುದ್ದೀನ್ ಉಪಸ್ಥಿತರಿದ್ದರು.

