ಕುಂಬಳೆ: ಮೊಗ್ರಾಲ್ ಅಳಿವೆಯಿಂದ ಅನಧಿಕೃತವಾಗಿ ಮರಳು ಸಂಗ್ರಹಿಸುತ್ತಿದ್ದ ಸಂದರ್ಭ ಕುಂಬಳೆ ಠಾಣೆ ಪೊಲೀಸರು ನಡೆಸಿದ ದಾಳಿಯಿಂದ ಎರಡು ದೋಣಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮರಳುದಂಧೆಕೋರರು ಓಡಿ ಪರಾರಿಯಾಗಿದ್ದಾರೆ. ಈ ಹಿಂದೆ ಮರಳುಸಂಗ್ರಹಿಸಿ ದೋಣಿಯಲ್ಲಿ ಸಾಗಿಸಿ ದಡದಲ್ಲಿ ಗುಡ್ಡೆಹಾಕಿ ಟಿಪ್ಪರ್‍ನಲ್ಲಿ ಸಾಗಿಸುತ್ತಿದ್ದ ದಂಧೆಕೋರರು ಮರಳನ್ನು ಗೋಣಿಚೀಲದಲ್ಲಿ ತುಂಬಿಸಿ, ಪಿಕ್‍ಅಪ್ ವಾಹನದಲ್ಲಿ ಸಾಗಿಸುವ ಮೂಲಕ ದಂಧೆಯಲ್ಲಿ ನಿರತರಾಗಿದ್ದರು. ಇವರನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಪೊಲೀಸರು ಗಾಳಹಾಕಿ ಮೀನು ಹಿಡಿಯುವ ಸೋಗಿನಲ್ಲಿ ಮಾರುವೇಷದಲ್ಲಿ ಹೊಳೆಬದಿ ತೆರಳಿ ಮರಳುದಂಧೆಕೋರರನ್ನು ಸೆರೆಹಿಡಿಯಲು ಕಾರ್ಯಾಚರಣೆ ನಡೆಸಿದ್ದಾರೆ. ದೋಣಿಯಲ್ಲಿ ಮರಳು ಸಂಗ್ರಹಿಸಿ ದಡಕ್ಕೆ ತರುತ್ತಿರುವ ಮಧ್ಯೆ, ಗಾಳಹಾಕಿ ಮೀನುಹಿಡಿಯುತ್ತಿರುವವರೆಂಬುದು ಗಮನಕ್ಕೆ ಬರುತ್ತಿದ್ದಂತೆ ದೋಣಿಯಿಂದ ಹೊಳೆಗೆ ಧುಮುಕಿ ಈಜಿ ಪರಾರಿಯಾಗಿದ್ದಾರೆ.ಗುರುವಾರ ರಾತ್ರಿ 10ಕ್ಕೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದು, ಶುಕ್ರವಾರ ನಸುಕಿನ ವರೆಗೂ ಮುಂದುವರಿದಿತ್ತು. ವಶಪಡಿಸಿಕೊಂಡ ದೋಣಿಗಳನ್ನು ಪೊಲೀಸರು ಜೆಸಿಬಿ ಬಳಸಿ ನಾಶಗೊಳಿಸಿದ್ದಾರೆ.

