ಕಾಸರಗೋಡು: ನಗರದ ಬೀರಂತಬೈಲು ಮುಖ್ಯ ರಸ್ತೆಯ ಶೋಚನೀಯಾವಸ್ಥೆ ಪರಿಹರಿಸುವಂತೆ ಆಗ್ರಹಿಸಿ, ಬೀರಂತಬೈಲ್ ಪ್ರದೇಶ ವ್ಯಾಪ್ತಿಯ ಜನರು ಕಾಸರಗೋಡು ನಗರಸಭಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.
ಪ್ರಸಕ್ತ ರಸ್ತೆಯನ್ನು ಡಾಂಬರೀಕರಣದೊಂದಿಗೆ ಅಭಿವೃದ್ಧಿಪಡಿಸಲು ಗುತ್ತಿಗೆದಾರರೊಬ್ಬರು ಒಪ್ಪಂದಪತ್ರಕ್ಕೆ ಸಹಿ ಹಾಕಿದ್ದು, ಅಕಾಲಿಕ ಮಳೆ ಹಿನ್ನೆಲೆಯಲ್ಲಿ ಕಾಮಗಾರಿ ಮುಂದೂಡುತ್ತಾ ಬರಲಾಗಿತ್ತು. ನಂತರ ಕಾಂಕ್ರೀಟ್ ಮಿಶ್ರಣ ಹೊಂಡಗಳಿಗೆ ತುಂಬುವ ಕಾಮಗಾರಿ ಆರಂಭಿಸಿದ್ದರೂ, ಡಾಂಬರೀಕರಣ ನಡೆಸದಿರುವ ಹಿನ್ನೆಲೆಯಲ್ಲಿ ರಸ್ತೆ ಸಂಪೂರ್ಣ ಧೂಳುಮಯವಾಗಿದೆ. ಇದರಿಂದ ಈ ಪ್ರದೇಶದ ಜನತೆ ಧೂಳಿನ ಸಮಸ್ಯೆಯಿಂದ ಕಂಗೆಟ್ಟಿದ್ದಾರೆ. ಆರೋಗ್ಯ ಸಮಸ್ಯೆ ತಲೆದೋರಿದ್ದು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ. ಸ್ಥಳೀಯ ನಿವಾಸಿಗಳ ನಿಯೋಗವೊಂದು ಕಾಸರಗೋಡು ನಗರಸಭಾ ಕಚೇರಿಗೆ ತೆರಳಿ ರಸ್ತೆ ದುರಸ್ತಿಕಾರ್ಯ ಶೀಘ್ರ ನಡೆಸುವಂತೆ ಅಧಿಕಾರಿಗಳನ್ನು ಆಗ್ರಹಿಸಿದರು.


