ಬ್ಯಾಂಕಾಕ್ : ಕಾಂಬೋಡಿಯಾ ಜತೆಗಿನ ವಿವಾದಿತ ಗಡಿ ಪ್ರದೇಶದಲ್ಲಿ ಥಾಯ್ಲೆಂಡ್ ಸೋಮವಾರ ವೈಮಾನಿಕ ದಾಳಿ ಆರಂಭಿಸಿದೆ. ಇದು ಉಭಯ ರಾಷ್ಟ್ರಗಳ ನಡುವಿನ ಸಂಘರ್ಷದ ಕಿಡಿ ಮತ್ತೆ ಭುಗಿಲೇಳುವ ಭೀತಿ ಸೃಷ್ಟಿಸಿದೆ.
ದೀರ್ಘ ಕಾಲದಿಂದ ಬಗೆಹರಿಯದೇ ಉಳಿದಿರುವ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಜುಲೈನಲ್ಲಿ ಈ ಎರಡು ರಾಷ್ಟ್ರಗಳ ನಡುವೆ ಸಂಘರ್ಷ ಏರ್ಪಟ್ಟು ಹಲವು ಸೈನಿಕರು ಹಾಗೂ ನಾಗರಿಕರು ಮೃತಪಟ್ಟಿದ್ದರು.
ನಂತರ ಅಕ್ಟೋಬರ್‌ನಲ್ಲಿ ಕದನವಿರಾಮ ಒಪ್ಪಂದ ನಡೆದಿತ್ತು. ಇದೀಗ ಒಪ್ಪಂದವನ್ನು ಉಲ್ಲಂಘಿಸಲಾಗಿದೆ ಎಂದು ಎರಡೂ ರಾಷ್ಟ್ರಗಳು ಪರಸ್ಪರ ದೂರಿಕೊಂಡು ದಾಳಿಗೆ ಮುಂದಾಗಿವೆ.
ಥಾಯ್ಲೆಂಡ್ ಸೇನೆಯ ವಕ್ತಾರ ಮೇಜರ್ ಜನರಲ್ ವಿಂಥೈ ಸುವಾರಿ ಈ ಬಗ್ಗೆ ಮಾತನಾಡಿ, 'ಕಾಂಬೋಡಿಯಾ ಪಡೆಗಳು ಭಾನುವಾರ ನಮ್ಮ ಗಡಿ ಭಾಗದ ಪ್ರದೇಶಗಳನ್ನು ಗುರಿಯಾಗಿಸಿ ಮೊದಲಿಗೆ ದಾಳಿ ನಡೆಸಿವೆ. ಇದರಿಂದಾಗಿ ನಮ್ಮ ಒಬ್ಬ ಯೋಧ ಮೃತಪಟ್ಟಿದ್ದು, ಎಂಟು ಯೋಧರು ಗಾಯಗೊಂಡಿದ್ದಾರೆ. ಗಡಿ ಭಾಗದಲ್ಲಿ ವಾಸಿಸುತ್ತಿರುವ 50 ಸಾವಿರಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸಲಾಗಿದೆ. ದಾಳಿಗಳನ್ನು ಹಿಮ್ಮೆಟ್ಟಿಸುವುದಕ್ಕಾಗಿ ನಮ್ಮ ಸೇನಾಪಡೆಯು ಸೋಮವಾರ ಯುದ್ಧ ವಿಮಾನಗಳನ್ನು ಬಳಸಿದೆ' ಎಂದಿದ್ದಾರೆ.
ಇತ್ತ ಕಾಂಬೋಡಿಯಾದ ರಕ್ಷಣಾ ಸಚಿವಾಲಯದ ವಕ್ತಾರೆ ಮಾಲಿ ಸೂಚೆಟಾ ಪ್ರತಿಕ್ರಿಯಿಸಿ, 'ಥಾಯ್ಲೆಂಡ್ ಸೇನೆಯೇ ಸೋಮವಾರ ಮೊದಲಿಗೆ ನಮ್ಮ ಮೇಲೆ ದಾಳಿ ನಡೆಸಿದೆ. ಘಟನೆಯಲ್ಲಿ ನಾಲ್ವರು ನಾಗರಿಕರು ಮೃತಪಟ್ಟಿದ್ದು, ಒಂಬತ್ತಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಆದರೆ, ನಾವು ಪ್ರತಿದಾಳಿ ನಡೆಸಿಲ್ಲ. ಗಡಿ ಪ್ರದೇಶದಲ್ಲಿ ಶಾಂತಿ ಕದಡುವಂತಹ ಯಾವುದೇ ಚಟುವಟಿಕೆಗಳನ್ನು ನಡೆಸಲು ಕಾಂಬೋಡಿಯಾ ಬಯಸುವುದಿಲ್ಲ. ಹೀಗಾಗಿ ತಕ್ಷಣವೇ ದಾಳಿ ನಿಲ್ಲಿಸುವಂತೆ ಥಾಯ್ಲೆಂಡ್ ಅನ್ನು ಆಗ್ರಹಿಸುತ್ತೇವೆ' ಎಂದು ಹೇಳಿದ್ದಾರೆ.
ಏತನ್ಮಧ್ಯೆ, 'ಥಾಯ್ಲೆಂಡ್ ಎಂದಿಗೂ ಸಂಘರ್ಷ ಬಯಸುವುದಿಲ್ಲ. ಆದರೆ, ನಮ್ಮ ಸಾರ್ವಭೌಮತ್ವಕ್ಕೆ ಧಕ್ಕೆಯಾದರೆ ಸಹಿಸಲು ಸಾಧ್ಯವಿಲ್ಲ. ಅಗತ್ಯಬಿದ್ದರೆ ದೇಶದ ರಕ್ಷಣೆಗಾಗಿ ಮಿಲಿಟರಿ ಕಾರ್ಯಾಚರಣೆಗಳನ್ನು ನಡೆಸಲಾಗುವುದು' ಎಂದು ಥಾಯ್ಲೆಂಡ್‌ನ ಪ್ರಧಾನಿ ಎಚ್ಚರಿಕೆ ನೀಡಿರುವುದು ಮಹತ್ವ ಪಡೆದಿದೆ.

