ನ್ಯೂಯಾರ್ಕ್: ಅಮೆರಿಕ ಸರ್ಕಾರವು ಎಚ್-1ಬಿ ವೀಸಾ ಅರ್ಜಿದಾರರು ಹಾಗೂ ಅವರ ಅವಲಂಬಿತರ ಎಚ್-4 ಅರ್ಜಿಗಳ ಪರಿಶೀಲನಾ ಕ್ರಮವನ್ನು ಮತ್ತಷ್ಟು ವಿಸ್ತರಿಸಿದೆ. ತಮ್ಮ ಸಾಮಾಜಿಕ ಜಾಲತಾಣಗಳ 'ಗೋಪ್ಯತಾ ಸೆಟ್ಟಿಂಗ್'ಗಳನ್ನು ಸಾರ್ವಜನಿಕಗೊಳಿಸಬೇಕು ಎಂದು ಸೂಚನೆ ನೀಡಿದೆ.
ಬುಧವಾರವೇ ಈ ಕುರಿತಾಗಿ ಅಮೆರಿಕ ಗೃಹ ಸಚಿವಾಲಯವು ಹೊಸ ಆದೇಶವನ್ನು ಹೊರಡಿಸಿದ್ದು, ಡಿಸೆಂಬರ್ 15ರಿಂದಲೇ ಈ ಪ್ರಕ್ರಿಯೆ ಆರಂಭಗೊಳ್ಳಲಿದೆ. ಎಲ್ಲಾ ಎಚ್-1ಬಿ ಅರ್ಜಿದಾರರು ಹಾಗೂ ಅವಲಂಬಿತರ ಆನ್‌ಲೈನ್ ಮಾಹಿತಿ ಕುರಿತಂತೆ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದೆ.
ವಿದ್ಯಾರ್ಥಿಗಳು, ಸಂಶೋಧಕರಿಗೆ ಈಗಾಗಲೇ ಪರಿಶೀಲನೆಯನ್ನು ಕಡ್ಡಾಯಗೊಳಿಸಲಾಗಿದೆ. ಈ ಪದ್ಧತಿಯನ್ನು ಎಚ್-1ಬಿ ವೀಸಾ, ಎಚ್-4 ವೀಸಾ ಅರ್ಜಿದಾರರಿಗೂ ವಿಸ್ತರಿಸಲಾಗಿದೆ.
ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಸಚಿವಾಲಯವು, 'ಅಮೆರಿಕದ ವೀಸಾವು ಸವಲತ್ತು ಹೊರತು ಹಕ್ಕು ಅಲ್ಲ. ಹೀಗಾಗಿ, ಲಭ್ಯವಿರುವ ಎಲ್ಲ ಮಾಹಿತಿಗಳನ್ನು ಪರಿಶೀಲಿಸಿ, ಅಮೆರಿಕದ ಭದ್ರತೆ ಹಾಗೂ ಸುರಕ್ಷತೆಗೆ ಯಾವುದೇ ತೊಂದರೆಯಿಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳಲಾಗುವುದು. ಪ್ರತಿ ವೀಸಾ ತೀರ್ಪು ಕೂಡ ರಾಷ್ಟ್ರೀಯ ಭದ್ರತೆಯ ಮೇಲೆ ನಿರ್ಧಾರವಾಗಿರುತ್ತದೆ' ಎಂದು ತಿಳಿಸಿದೆ.
ಟ್ರಂಪ್ ಸರ್ಕಾರವು ವಲಸೆ ನಿಯಮಗಳನ್ನು ಕಠಿಣಗೊಳಿಸಿದ ಬಳಿಕ ಈ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.




