ಭೋಪಾಲ್: ಭೋಪಾಲ್ ವಿಷಾನಿಲ ದುರಂತದ 41ನೇ ವರ್ಷಾಚರಣೆಯ ಪ್ರಯುಕ್ತ ಆಯೋಜಿಸಲಾದ ರ್ಯಾಲಿಯಲ್ಲಿ ಸಂತ್ರಸ್ತರೊಂದಿಗೆ ಆರೆಸ್ಸೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಘರ್ಷಣೆಗಿಳಿದ ಘಟನೆ ನಡೆದಿದೆ.
ಭೋಪಾಲ್ ವಿಷಾನಿಲ ದುರಂತ ಸಂತ್ರಸ್ತರ ಸಂಘಟನೆಗಳು ರ್ಯಾಲಿಯಲ್ಲಿ 'ಆರೆಸ್ಸೆಸ್ ಕಾರ್ಯಕರ್ತ'ನೆಂದು ಬಿಂಬಿಸುವಂತಹ ಪ್ರತಿಕೃತಿಯನ್ನು ಪ್ರದರ್ಶಿಸಿರುವುದು ಆರೆಸ್ಸೆಸ್ ಹಾಗೂ ಬಿಜೆಪಿ ಬೆಂಬಲಿಗರನ್ನು ಕೆರಳಿಸಿತ್ತು.
ಪಾದಯಾತ್ರೆಯನ್ನು ಆಯೋಜಿಸಿದ ಗುಂಪುಗಳ ಜೊತೆ ವಾಗ್ವಾದಕ್ಕಿಳಿದ ಅವರು, ತಕ್ಷಣವೇ ಆ ಪ್ರತಿಕೃತಿಯನ್ನು ತೆರವುಗೊಳಿಸುವಂತೆ ಆಗ್ರಹಿಸಿದರು.
ರ್ಯಾಲಿಯ ಆಯೋಜಕರ ಈ ಕೃತ್ಯವು 'ಪ್ರಚೋದನಕಾರಿ ಹಾಗೂ ದೇಶವಿರೋಧಿ' ಎಂದು ಅವರು ಆಪಾದಿಸಿದ್ದಾರೆ.
ಆದರೆ ವಿಷಾನಿಲಸಂತ್ರಸ್ತ ಸಂಘಟನೆಗಳು ಆರೋಪವನ್ನು ತಳ್ಳಿಹಾಕಿದ್ದು, ಈ ಪ್ರತಿಕೃತಿಯು ದುರಂತಕ್ಕೆ ಹೊಣೆಗಾರರಾದ ಸಂಸ್ಥೆಗಳನ್ನು ಪ್ರತಿನಿಧಿಸುತ್ತಿದೆಯೇ ಹೊರತು ಯಾವುದೇ ಗುಂಪು ಅಥವಾ ಸಂಘಟನೆಯನ್ನಲ್ಲವೆಂದು ಹೇಳಿದ್ದವು. ಬಿಜೆಪಿ ಸರಕಾರವು ಡೋವ್ ಕೆಮಿಕಲ್ ಸಂಸ್ಥೆಯನ್ನು ರಕ್ಷಿಸುತ್ತಿದೆ ಎಂದು ಅವು ಆರೋಪಿಸಿದ್ದವು.
ಇತ್ತಂಡಗಳ ನಡುವೆ ರ್ಯಾಲಿಯಲ್ಲಿ ವಾಗ್ವಾದ ತೀವ್ರಗೊಂಡಂತೆಯೇ, ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಕೃತಿಯನ್ನು ತೆರವುಗೊಳಿಸಿ ಪರಿಸ್ಥಿತಿ ಉಲ್ಬಣಿಸದಂತೆ ತಡೆದರು.
ರ್ಯಾಲಿಯ ಹೆಸರಿನಲ್ಲಿ ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ನಡೆಸಲಾಗುತ್ತಿದೆಯೆಂದು ಆರೆಸ್ಸೆಸ್ ಹಾಗೂ ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಶಾಂತಿಯುತ ವಾತಾವರಣಕ್ಕೆ ಭಂಗ ತರಲು ಹಾಗೂ ಗಲಭೆಯನ್ನು ಪ್ರಚೋದಿಸಲು ಉದ್ದೇಶಪೂರ್ವಕವಾಗಿ ವಿವಾದಾತ್ಮಕ ಪ್ರತಿಕೃತಿಯನ್ನು ಪ್ರದರ್ಶಿಸಲಾಗಿದೆ ಎಂದು ಆರೆಸ್ಸೆಸ್-ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ. ರ್ಯಾಲಿ ಸಂಘಟಕರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಆದರೆ ಅವರ ಆರೋಪವು ವಿಷಾನಿಲ ಸಂತ್ರಸ್ತರ ಸಂಘಟನೆಗಳು ನಿರಾಕರಿಸಿದ್ದು, ದುರ್ಘಟನೆ ಸಂಭವಿಸಿ 41 ವರ್ಷಗಳಾದರೂ, ಬದುಕುಳಿದವರು ಇನ್ನೂ ನ್ಯಾಯದಾನದ ನಿರೀಕ್ಷೆಯಲ್ಲಿದ್ದಾರೆ. ತಾವು ಪದೇ ಪದೇ ಮನವಿ ಮಾಡಿದ ಹೊರತಾಗಿಯೂ ಯೂನಿಯನ್ ಕಾರ್ಬೈಡ್, ಡೋವ್ ಕೆಮಿಕಲ್ ಹಾಗೂ ಅದರ ಸಹ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿಫಲವಾಗಿವೆ ಎಂದು ಅವು ಆರೋಪಿಸಿವೆ.




